ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ಹಡಗು ದುರಂತ; ಮೃತಪಟ್ಟವರಲ್ಲಿ ಭಾರತೀಯ ಮೂಲದ ದಂಪತಿ ಇದ್ದಿರುವ ಶಂಕೆ 

Sumana Upadhyaya

ನಾಗ್ಪುರ: ಅಮೆರಿಕಾದ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಜ್ ದ್ವೀಪದಲ್ಲಿ ಕಳೆದ ಸೋಮವಾರ ಸಂಭವಿಸಿದ ಹಡಗು ದುರಂತದಲ್ಲಿ ಮೃತಪಟ್ಟವರಲ್ಲಿ ಭಾರತೀಯ ಮೂಲದ ದಂಪತಿ ಕೂಡ ಇದ್ದರು ಎಂಬ ಮಾಹಿತಿ ಹೊರಬಿದ್ದಿದೆ.


ನಾಗ್ಪುರ ಮೂಲದ ಮಕ್ಕಳ ವೈದ್ಯ ಸತೀಶ್ ದಿಯೊಪುಜರಿ ಅವರ ಪುತ್ರಿ ಮತ್ತು ಅಳಿಯ ಅವರು ಸಹ ಕ್ಯಾಲಿಫೋರ್ನಿಯಾದ ತೀರ ಭಾಗದಲ್ಲಿ ಕಳೆದ ಸೋಮವಾರ ಸಂಭವಿಸಿದ ದೋಣಿ ದುರುಂತದಲ್ಲಿ ಅಸುನೀಗಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.
ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಸತೀಶ್ ಅವರ ಮಗಳು ಸಂಜೀರಾ ಡಿಯೊಪುಜರಿ ಅಮೆರಿಕಾದಲ್ಲಿ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕೌಸ್ತುಭ ನಿರ್ಮಲ್ ಎಂಬುವವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ್ದರು.


ಡಿಯೊಪುಜರಿ ಕುಟುಂಬದವರಿಗೆ ಅಮೆರಿಕಾದ ಅಧಿಕಾರಿಗಳಿಂದ ದಂಪತಿ ಸಾವಿನ ಬಗ್ಗೆ ದೃಢ ಮಾಹಿತಿ ಸಿಕ್ಕಿಲ್ಲ. ಆದರೆ ಕುಟುಂಬಸ್ಥರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ದಂಪತಿ ದ್ವೀಪಕ್ಕೆ ಸ್ಕೂಬಾ ಡೈವಿಂಗ್ ಗೆಂದು ಹೋಗಿದ್ದರು. ಆಗ ಬೆಂಕಿ ಅನಾಹುತದ ದುರ್ಘಟನೆ ಸಂಭವಿಸಿದೆ.


ಬೆಂಕಿ ಅನಾಹುತದಿಂದ ಐದು ಮಂದಿಗೆ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಡಾ ಡಿಯೊಪುಜರಿಯವರ ಮತ್ತೊಬ್ಬ ಮಗಳು ಕೂಡ ಅಮೆರಿಕಾದಲ್ಲಿ ನೆಲೆಸಿದ್ದು ಅವರು ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸುತ್ತಿದ್ದಾರೆ. ನಾಗ್ಪುರದ ವೈದ್ಯ ಡಾ ಡಿಯೊಪುಜರಿ ಸದ್ಯದಲ್ಲಿಯೇ ಅಮೆರಿಕಾಕ್ಕೆ ತೆರಳಲಿದ್ದಾರೆ.


ಕಳೆದ ಸೋಮವಾರ ಅಮೆರಿಕಾದ ಕ್ಯಾಲಿಫೋರ್ನಿಯಾದ ದಕ್ಷಿಣ ತೀರ ಭಾಗದಲ್ಲಿರುವ ದ್ವೀಪದಲ್ಲಿ ಸ್ಕೂಬಾ ಡೈವರ್ ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿತ್ತು. ಡೈವ್ ದೋಣಿಯಿಂದ ಹೊಗೆಯೆಲ್ಲ ಆರಿದ ನಂತರ ನೋಡಿದರೆ ಯಾರೂ ಬದುಕುಳಿದದ್ದು ಕಂಡುಬರಲಿಲ್ಲ. 


ದುರ್ಘಟನೆ ನಡೆಯುವಾಗ ಹಡಗಿನಲ್ಲಿ 33 ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿಗಳಿದ್ದರು. ಹಡಗಿನ ಟಾಪ್ ಡೆಕ್ ನಲ್ಲಿ ನಿದ್ರಿಸುತ್ತಿದ್ದ ಐವರು ಸಿಬ್ಬಂದಿ ಕೆಳಗೆ ಹಾರಿ ಸಣ್ಣ ದೋಣಿಯನ್ನೇರಿ ತಮ್ಮನ್ನು ಕಾಪಾಡಿಕೊಳ್ಳುವಲ್ಲಿ ಬಚಾವಾದರು. ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ.

SCROLL FOR NEXT