ವಿದೇಶ

ಮತ್ತೆ ಪಾಕ್ ಉದ್ಧಟತನ: ರಾಷ್ಟ್ರಪತಿ ಕೋವಿಂದ್ ಗೂ ವಾಯುಗಡಿ ಬಳಕೆ ನಿರಾಕರಣೆ!

Srinivasamurthy VN

ನವದೆಹಲಿ: ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಂತಿರುವ ಪಾಕಿಸ್ತಾನ ಮತ್ತೆ ಉದ್ಧಟತನ ತೋರಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ತನ್ನ ವಾಯುಗಡಿ ಬಳಕೆ ಮಾಡಲು ಅನುಮತಿ ನಿರಾಕರಿಸಿದೆ.

ಕೋವಿಂದ್ ಅವರು ಮೂರು ರಾಷ್ಟ್ರಗಳ ಪ್ರವಾಸಕ್ಕೆ ತೆರಳಲಿದ್ದು, ಐಸ್ ಲೆಂಡ್, ಸ್ವಿಟ್ಜರ್ಲೆಂಡ್ ಮತ್ತು ಸ್ಲೊವೇನಿಯಾದಲ್ಲಿ ಉನ್ನತ ಮಟ್ಟದ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಹೀಗಾಗಿ ಅವರ ವಿಮಾನ ಪ್ರಯಾಣಕ್ಕಾಗಿ ಭಾರತ ಸರ್ಕಾರ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಲು ಅನುಮತಿ ಕೇಳಿತ್ತು. ಇದಕ್ಕೆ ಪಾಕಿಸ್ತಾನ ಸರ್ಕಾರ ನಿರಾಕರಿಸಿದ್ದು, ಭಾರತದ ಇತ್ತೀಚಿಗಿನ ನಡೆಯಿಂದಾಗಿ ತಾವು ಕೋವಿಂದ್ ಅವರಿಗೆ ವಾಯುಗಡಿ ಬಳಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು, ಭಾರತದ ಇತ್ತೀಚೆಗಿನ ನಡೆ ಅತ್ಯಂತ ಹೇಯವಾದದ್ದು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಇಂತಹ ನಡೆ ಸಹಿಸಲಸಾಧ್ಯ. ಹೀಗಾಗಿ ಭಾರತಕ್ಕೆ ನಮ್ಮ ವಾಯುಗಡಿಯನ್ನು ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಬೆನ್ನಲ್ಲೇ ಪಾಕಿಸ್ತಾನ ತನ್ನ ವಾಯುಗಡಿಯನ್ನು ನಿರ್ಬಂಧಿಸಿತ್ತು.  ಆ ಬಳಿಕ ಮಾರ್ಚ್ ತಿಂಗಳಲ್ಲಿ ವಾಯುಗಡಿಯನ್ನು ಬಳಕೆಗೆ ನೀಡಿ್ತಾದರೂ, ಭಾರತದ ವಾಣಿಜ್ಯ ವಿಮಾನಗಳನ್ನು ನಿರ್ಬಂಧಿಸಿತ್ತು. ಇದೀಗ ಮತ್ತೆ ವಾಯುಗಡಿಯನ್ನು ಭಾರತಕ್ಕೆ ಸಂಪೂರ್ಣ ನಿಷೇಧಿಸಿದೆ.

SCROLL FOR NEXT