ವಿದೇಶ

ಕಾಶ್ಮೀರ ವಿಚಾರದಲ್ಲಿ ಭಾರತ-ಪಾಕ್ ಮಧ್ಯೆ ಪ್ರವೇಶಿಸಲು ಇಚ್ಛಿಸುವುದಿಲ್ಲ: ವಿಶ್ವಸಂಸ್ಥೆ ಮುಖ್ಯಸ್ಥರು 

Sumana Upadhyaya

ಯುನೈಟೆಡ್ ನೇಷನ್ಸ್: ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಭಣ ಪರಿಸ್ಥಿತಿ ಉಂಟಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಎರಡೂ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 


ಕಳೆದ ತಿಂಗಳು ಫ್ರಾನ್ಸ್ ನ ಬಿಯರಿಟ್ಜ್ ನಲ್ಲಿ ಜಿ7 ಶೃಂಗಸಭೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದ ವೇಳೆ ಮತ್ತು ನಂತರ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ಅವರ ಜೊತೆ ಮಾತುಕತೆ ನಡೆಸಿದ್ದ ವೇಳೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.


ಕಾಶ್ಮೀರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಎಂದು ಮನವಿ ಮಾಡಿ ಕಳೆದ ಸೋಮವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಲೊಧಿ ಗುಟೆರೆಸ್ ಅವರನ್ನು ಭೇಟಿ ಮಾಡಿದ್ದರು.


ಗುಟೆರೆಸ್ ಅವರ ಸಂದೇಶ ಎಲ್ಲರಿಗೂ ಒಂದೇ ಆಗಿದೆ. ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕಾಶ್ಮೀರ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಉಲ್ಭಣಗೊಳ್ಳಬಹುದಾದ ಪರಿಸ್ಥಿತಿಗಳ ಬಗ್ಗೆ ಅವರಿಗೆ ಆತಂಕವಿದೆ. ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದರು.


ಈ ತಿಂಗಳಾಂತ್ಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು ಅದರಲ್ಲಿ ಕಾಶ್ಮೀರ ವಿಚಾರವಾಗಿ ಎರಡು ದೇಶಗಳ ಮಧ್ಯೆ ಗುಟೆರೆಸ್ ಮಧ್ಯ ಪ್ರವೇಶಿಸುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಗೆ ವಕ್ತಾರರು ಈ ರೀತಿ ಉತ್ತರಿಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಲಿದ್ದಾರೆ.

SCROLL FOR NEXT