ವಿದೇಶ

ಪಿಎನ್ಬಿ ಹಗರಣ: ವಿಡಿಯೊ ಲಿಂಕ್ ಮೂಲಕ ಲಂಡನ್ ಕೋರ್ಟ್ ನಲ್ಲಿ ಇಂದು ನೀರವ್ ಮೋದಿ ವಿಚಾರಣೆ 

Sumana Upadhyaya

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ದೇಶಭ್ರಷ್ಟನೆನಿಸಿ ಲಂಡನ್ ನ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ಕಾಲ್ ಓವರ್ ರಿಮಾಂಡ್ ವಿಚಾರಣೆಗೆ ಗುರುವಾರ ಲಂಡನ್ ನ ಕಾರಾಗೃಹದಿಂದ ವಿಡಿಯೊ ಲಿಂಕ್ ಮೂಲಕ ಲಂಡನ್ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲಿದ್ದಾನೆ.


ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಭಾರತಕ್ಕೆ ಗಡೀಪಾರು ಕೇಸಿನಲ್ಲಿ ಹೋರಾಟ ನಡೆಸುತ್ತಿರುವ 48 ವರ್ಷದ ನೀರವ್ ಮೋದಿ ಕಳೆದ ಆಗಸ್ಟ್ 22ರಂದು ಕಾಲ್ ಓವರ್ ವಿಚಾರಣೆಗೆ ಹಾಜರಾಗಿದ್ದನು. ಈ ನ್ಯಾಯಾಲಯದಲ್ಲಿ ಭಾರತಕ್ಕೆ ಗಡೀಪಾರು ಮಾಡುವುದರ ವಿರುದ್ಧ ಹೋರಾಟ ನಡೆಸುತ್ತಿರುವ ನೀರವ್ ಮೋದಿಯ 5 ದಿನಗಳ ಗಡೀಪಾರು ವಿಚಾರಣೆ ಮುಂದಿನ ವರ್ಷ ಮೇ 11ರಂದು ಆರಂಭವಾಗುವ ಸಾಧ್ಯತೆಯಿದೆ.


ಗಡೀಪಾರು ವಿಚಾರಣೆ ನಡೆಯುವ ಮೊದಲು ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಕರಣ ನಿರ್ವಹಣೆ ವಿಚಾರಣೆ ನಡೆಯುವ ಸಾಧ್ಯತೆಯಿದೆ. 


ನೈರುತ್ಯ ಲಂಡನ್ ನ ವಾಂಡ್ಸ್ ವರ್ತ್ ಕಾರಾಗೃಹದಲ್ಲಿ ಸದ್ಯ ಮೋದಿಯನ್ನು ಇರಿಸಲಾಗಿದ್ದು ಇದು ಇಂಗ್ಲೆಂಡಿನ ಅತ್ಯಂತ ಜನನಿಬಿಡ ಕಾರಾಗೃಹವಾಗಿದೆ. ಭಾರತ ಸರ್ಕಾರ ದಾಖಲಿಸಿದ್ದ ಕೇಸಿನ ಆಧಾರದ ಮೇಲೆ ಸ್ಕಾಟ್ ಲ್ಯಾಂಡ್ ಯಾರ್ಡ್ ವಿಚಾರಣೆ ನಡೆಸಿ ಕಳೆದ ಮಾರ್ಚ್ ತಿಂಗಳಲ್ಲಿ ನೀರವ್ ಮೋದಿ ವಿರುದ್ದ ಗಡೀಪಾರು ವಾರಂಟ್ ಹೊರಡಿಸಿದ ನಂತರ ಬಂಧಿಸಲಾಗಿತ್ತು. 


ಇಂಗ್ಲೆಂಡಿನ ಕಾನೂನು ಪ್ರಕಾರ, ನ್ಯಾಯಾಂಗ ಕಸ್ಟಡಿ ವಿಚಾರಣೆ ಬಾಕಿ ಇರುವಾಗ 28 ದಿನಗಳೊಳಗೆ ನೀರವ್ ಮೋದಿಯನ್ನು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಬೇಕಿದೆ. ಆತನ ಬಂಧನವಾದ ನಂತರ ಆನಂದ್ ದೂಬೆ ಮತ್ತು ಬ್ಯಾರಿಸ್ಟರ್ ಕ್ಲಾರೆ ಮೊಂಟ್ಗೊಮೆರಿ ನೇತೃತ್ವದ ಆತನ ಪರವಾದ ನ್ಯಾಯತಂಡ ನಾಲ್ಕು ಜಾಮೀನು ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಅದು ಪ್ರತಿಬಾರಿಯೂ ತಿರಸ್ಕೃತಗೊಂಡಿದೆ.

SCROLL FOR NEXT