ವಿದೇಶ

ಒಂದೇ ವೇದಿಕೆಯಲ್ಲಿ ಮೋದಿ-ಟ್ರಂಪ್, ಪಾಕ್ ಪ್ರಧಾನಿಗೆ ಇಮ್ರಾನ್ ಖಾನ್ ಗೆ ಕಪಾಳ ಮೋಕ್ಷ ಇದ್ದಹಾಗೆ: ಶಲಭ್ ಕುಮಾರ್

Srinivasamurthy VN

ಹ್ಯೂಸ್ಟನ್: ಒಂದೇ ವೇದಿಕೆಯಲ್ಲಿ ಭಾರತದ ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಣಿಸಿಕೊಳ್ಳುತ್ತಿದ್ದು, ಇದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಿಕ್ಕ ಕಪಾಳ ಮೋಕ್ಷ ಎಂದು 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ ಅವರ ಪ್ರಚಾರ ಸಲಹೆಗಾರರಾಗಿದ್ದ ಶಲಭ್‌ ಶಲ್ಲಿ ಕುಮಾರ್‌ ಹೇಳಿದ್ದಾರೆ.

ಹ್ಯೂಸ್ಟನ್ ನಲ್ಲಿ ಮಾತನಾಡಿದ ಶಲಭ್ ಶಲ್ಲಿ ಕುಮಾರ್ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೆಕೊಳ್ಳಲಿರುವುದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಕಪಾಳಮೋಕ್ಷವೇ ಸರಿ ಎಂದು ಹೇಳಿದ್ದಾರೆ. ಅಂತೆಯೇ ಒಂದುವೇಳೆ ನಾನು ಚುನಾಯಿತನಾದರೆ ಭಾರತಕ್ಕೆ ಶ್ವೇತಭವನದಲ್ಲಿ ಒಬ್ಬ ಒಳ್ಳೆಯ ಸ್ನೇಹಿತ ಸಿಗಲಿದ್ದಾನೆ. ನಾವು ಹಿಂದೂಗಳನ್ನು ಪ್ರೀತಿಸುತ್ತೇವೆ ಎಂದು ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ ಹೇಳಿದ್ದರು. ಟ್ರಂಪ್‌ ಹಾಗೂ ಅವರ ಸರ್ಕಾರ ಈ ವಿಚಾರದಲ್ಲಿ ಬದ್ಧವಾಗಿದೆ’ ಎಂದು ಶಲಭ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ

ಇತ್ತೀಚೆಗೆ ಟ್ರಂಪ್‌ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆಯೂ ಪ್ರತಿಕ್ರಿಯಿಸಿದ  ಶಲಭ್ ಕುಮಾರ್ ಅವರು, ‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ಕೇಳಲಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಆ ಹೇಳಿಕೆ ನೀಡಲಾಗಿದೆ. ಅದು ಪೂರ್ವಯೋಜಿತವಲ್ಲ. ಅದರಲ್ಲಿ ಯಾವುದೇ ಉದ್ದೇಶ ಇಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಇನ್ನು ಹ್ಯೂಸ್ಟನ್ ನಲ್ಲಿ ಬಹುನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮವು ಇಂದು ನಡೆಯಲಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾದ್ಯತೆ ಇದೆ.

SCROLL FOR NEXT