ವಿದೇಶ

ಬಾಲಾಕೋಟ್ ಉಗ್ರರ ತಾಣ: ಬಿಪಿನ್ ರಾವತ್  ಹೇಳಿಕೆ ಸಂಪೂರ್ಣ ಆಧಾರರಹಿತ ಎಂದ ಪಾಕಿಸ್ತಾನ

Sumana Upadhyaya

ಇಸ್ಲಾಮಾಬಾದ್: ಈ ವರ್ಷದ ಆರಂಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನಾಶಗೊಳಿಸಿದ್ದ ಬಾಲಾಕೋಟ್ ನ ಭಯೋತ್ಪಾದಕ ಶಿಬಿರ ತಾಣಗಳಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಸಕ್ರಿಯಗೊಂಡಿವೆ ಎಂಬ ಭಾರತ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಇದು ಸಂಪೂರ್ಣ ಆಧಾರರಹಿತ ಎಂದು ಹೇಳಿದೆ.


ಮೊನ್ನೆ ಸೋಮವಾರ ಭಾರತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಚೆನ್ನೈಯಲ್ಲಿ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತೀರಾ ಇತ್ತೀಚೆಗೆ ಪಾಕಿಸ್ತಾನ ಬಾಲಾಕೋಟ್ ನ ಭಯೋತ್ಪಾದಕ ಶಿಬಿರ ತಾಣಗಳು ಮರು ಸಕ್ರಿಯಗೊಂಡಿದ್ದು 500 ಒಳನುಸುಳುಕೋರರು ಭಾರತದೊಳಗೆ ನುಗ್ಗಲು ಹೊಂಚುಹಾಕುತ್ತಿದ್ದಾರೆ. ಪಾಕಿಸ್ತಾನ ಇದೇ ರೀತಿಯ ವರ್ತನೆ ತೋರಿದರೆ ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಭಾರತ ಸೇನಾ ಮುಖ್ಯಸ್ಥರ ಹೇಳಿಕೆ ಸಂಪೂರ್ಣ ಆಧಾರರಹಿತ, ಇದು ಜಮ್ಮು-ಕಾಶ್ಮೀರದಲ್ಲಿ ಮಾನವೀಯತೆ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತ ಮಾಡುತ್ತಿರುವ ಹತಾಶೆಯ ಯತ್ನ, ಇಂತಹ ತಂತ್ರಗಳಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಸಮುದಾಯಗಳ ದಾರಿತಪ್ಪಿಸುವ ಕೆಲಸದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ಹೇಳಿದೆ. 


ಕಳೆದ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಹಿಂತೆಗೆದುಕೊಂಡ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ವಾತಾವರಣ ಉಂಟಾಗಿದೆ.

SCROLL FOR NEXT