ವಿದೇಶ

ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ 'ಗಾಂಧಿ ಸೋಲಾರ್ ಪಾರ್ಕ್' ಉದ್ಘಾಟಿಸಿದ ಪ್ರಧಾನಿ ಮೋದಿ

Sumana Upadhyaya

ನ್ಯೂಯಾರ್ಕ್: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ತೂಕದ ಗಾಂಧಿ ಸೋಲಾರ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಮಂಗಳವಾರ ಉದ್ಘಾಟಿಸಿದರು. 

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ಇತರ ಕೆಲವು ಗಣ್ಯರು ಉಪಸ್ಥಿತರಿದ್ದರು.


ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ನಡೆದ ಸಮಕಾಲೀನ ಜಗತ್ತಿನಲ್ಲಿ ಮಹಾತ್ಮಾ ಗಾಂಧಿಯವರ ಪ್ರಸ್ತುತತೆ ಎಂಬ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮಹಾತ್ಮಾ ಗಾಂಧೀಜಿಯವರ ವಿಶ್ವಸಂಸ್ಥೆ ಅಂಚೆಚೀಟಿಯನ್ನು ನಾಯಕರು ಬಿಡುಗಡೆ ಮಾಡಿದರು.

ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇಂದಿನ ಶತಮಾನಕ್ಕೆ ಗಾಂಧೀಜಿಯವರ ಆಲೋಚನೆಗಳು ಮತ್ತು ಮೌಲ್ಯಗಳು ಹೇಗೆ ಪ್ರಸ್ತುತವಾಗಿದೆ ಎಂದು ತಿಳಿಸಿಕೊಡುವ ಕಾರ್ಯಕ್ರಮವಾಗಿತ್ತು.


ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟೆರ್ರಸ್ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು, ಗಣ್ಯರು ಉಪಸ್ಥಿತರಿದ್ದರು. ಇಂದು ಪ್ರಧಾನಿ ಮೋದಿಯವರು ಓಲ್ಡ್ ವೆಸ್ಟ್ ಬುರಿಯಲ್ಲಿರುವ ನ್ಯೂಯಾರ್ಕ್ ಕ್ಯಾಂಪಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗಾಂಧಿ ಶಾಂತಿ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ 150 ಗಿಡಗಳನ್ನು ಇಲ್ಲಿ ನೆಡಲಾಗಿದೆ.


ಇದಕ್ಕೂ ಮುನ್ನ ಮೋದಿಯವರು ಬೇರೆ ದೇಶಗಳ ನಾಯಕರು ಮತ್ತು ವಿಶ್ವಸಂಸ್ಥೆ ಘಟಕಗಳ ಪ್ರತಿನಿಧಿಗಳ ಜೊತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆ ನಡೆಸಿದರು. 

SCROLL FOR NEXT