ವಿದೇಶ

ಉತ್ತಮ ಆಡಳಿತಕ್ಕೆ ಸೋಷಿಯಲ್ ಮೀಡಿಯಾ ಪ್ರಬಲ ಅಸ್ತ್ರ: ಪ್ರಧಾನಿ ಮೋದಿ 

Sumana Upadhyaya

ನ್ಯೂಯಾರ್ಕ್; ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿಶಾಲಿ ಮಾಧ್ಯಮವಾಗಿದ್ದು ಉತ್ತಮ ಆಡಳಿತಕ್ಕೆ ಪ್ರಬಲ ಅಸ್ತ್ರವಾಗಿ ಬಳಕೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ಬ್ಲೂಮ್ ಬರ್ಗ್ ಗ್ಲೋಬಲ್ ಬ್ಯುಸಿನೆಸ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇಂದು ಸೋಷಿಯಲ್ ಮೀಡಿಯಾ ಜನರ ಜೀವನದಲ್ಲಿ ಬಹಳ ಪ್ರಭಾವ ಬೀರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಷಿಯಲ್ ಮೀಡಿಯಾ ಬಹಳ ಶಕ್ತಿಶಾಲಿ ಮಾಧ್ಯಮ. ಈಗಾಗಲೇ ಅಸ್ಥಿತ್ವ ಹೊಂದಿರುವ ಮಾಧ್ಯಮಗಳು ನಕಲಿ ಸುದ್ದಿಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳು ಸಹಾಯ ಮಾಡುತ್ತವೆ ಎಂದರು.


ಉತ್ತಮ ಆಡಳಿತ ನಡೆಸಲು ಸಾಮಾಜಿಕ ಮಾಧ್ಯಮಗಳನ್ನು ಪ್ರಬಲ ಅಸ್ತ್ರವಾಗಿ ಧನಾತ್ಮಕ ರೀತಿಯಲ್ಲಿ ಬಳಕೆ ಮಾಡಬಹುದು. ಸೋಷಿಯಲ್ ಮೀಡಿಯಾಗಳ ಮೂಲಕ ನನ್ನ ಕಣ್ಣಿಗೆ ಕಂಡ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದೇನೆ ಎಂದು ಗುಜರಾತ್ ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡ ಜನರನ್ನು ಸೋಷಿಯಲ್ ಮೀಡಿಯಾ ಮೂಲಕ ಕಂಡು ಕಾಪಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದನ್ನು ವಿವರಿಸಿದರು.


ಒಂದು ದೇಶದ ಸರ್ಕಾರದ ಮುಖ್ಯಸ್ಥನಾಗಿ ಸೋಷಿಯಲ್ ಮೀಡಿಯಾಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಉತ್ತಮ ಆಡಳಿತಕ್ಕೆ ಉತ್ತಮ ಅಸ್ತ್ರವಾಗಿ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳಲು ನಾನು ಇಚ್ಛಿಸುತ್ತೇನೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.


ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಬಂದಾಗ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಫಾರ್ವರ್ಡ್ ಮಾಡಬೇಕು ಎಂದು ಸಹ ಮೋದಿ ಹೇಳಿದರು. ನಕಲಿ ಸುದ್ದಿಗಳು ಹಬ್ಬಿ ಅದು ವೈರಲ್ ಆಗುವುದನ್ನು ತಂತ್ರಜ್ಞಾನ ಮೂಲಕ ಬಗೆಹರಿಸಬೇಕು ಎಂದರು.

SCROLL FOR NEXT