ವಿದೇಶ

2022ರ ವರೆಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು: ಹಾವರ್ಡ್ ವಿಜ್ಞಾನಿಗಳು

Srinivasamurthy VN

ವಾಷಿಂಗ್ಟನ್: ಕೇವಲ ಲಾಕ್ ಡೌನ್ ನಿಂದ ಮಾತ್ರ ಮಾರಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ, 2022ರ ವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಈ ಜಗತ್ತು ವೈರಸ್ ಸೋಂಕಿನಿಂದ ವಿಮುಕ್ತಿ ಪಡೆಯಲಿದೆ ಎಂದು ವಿಜ್ಞಾನಿಗಳು  ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣದ ಹಿನ್ನಲೆಯಲ್ಲಿ ಎಚ್ಚರಿಕೆ ನೀಡಿರುವ ಹಾವರ್ಡ್ ವಿಜ್ಞಾನಿಗಳು, 'ಕೇವಲ ಒಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಮೂಲಕ ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು  ಸಾಧ್ಯವಾಗದು. 2022ರ ವರೆಗೂ ಸಾಮಾಜಿಕ ಅಂತರ( ದೈಹಿಕ ಅಂತರ) ಪಾಲಿಸುವಂತಹ ಕಠಿಣ ಕ್ರಮ ಜಾರಿಗೊಳಿಸಿದರೆ ಮಾತ್ರ ಮಾರಾಣಂತಿಕ ವೈರಸ್ ನಿಂದ ಜಗತ್ತು ವಿಮುಕ್ತಿಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ಸೋಂಕಿನಿಂದ ಮರಣಗಳ ಸಂಖ್ಯೆ ತಾರಕಕ್ಕೇರಿ (25 ಸಾವಿರ) ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. 

ಸಿಜನಲ್ ರೋಗವಾಗಲಿದೆ 'ಕೊರೋನಾ'
ಕೊರೋನಾ ಸಿಜನಲ್ ರೋಗವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದೂ ಎಚ್ಚರಿಕೆ ನೀಡಿರುವ ವಿಜ್ಞಾನಿಗಳು ತಾಪಮಾನ ಕನಿಷ್ಟ ಮಟ್ಟಕ್ಕೆ ಇಳಿಕೆಯಾಗುವ ಅವಧಿಯಲ್ಲಿ ಸೋಂಕಿನ ಪರಿಣಾಮ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಇನ್ನೂ ಸಾಮಾಜಿಕ ಅಂತರ  ಕಾಪಾಡಿಕೊಳ್ಳುವುದನ್ನು ಕಡ್ಡಾಯ ಗೊಳಿಸುವುದು ಸರಿಯಾದ ಕ್ರಮವಾದರೂ, ತ್ವರಿತವಾಗಿ ಕೊರೋನಾ ನಿರ್ಧರಣ ಪರೀಕ್ಷೆ ನಡೆಸಿದರೆ ಉತ್ತಮ ಫಲಿತಾಂಶ ಬರಲಿದೆ. ಅಂತೆಯೇ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು  ವೈರಸ್ ಹರಡುವುದನ್ನು ನಿಯಂತ್ರಿಸಬಹುದು ಎಂದು ಹಾರ್ವರ್ಡ್ ವಿಜ್ಞಾನಿ ಡಾ. ಮಾರ್ಕ್ ಲಿಪ್ಸಿಚ್ ತಿಳಿಸಿದ್ದಾರೆ.

ಅದೇ ರೀತಿ ಕೊರೊನಾ ಕೊನೆಗೊಳಿಸುವ ಅಂತಿಮ ಆಯುಧ ಲಸಿಕೆಯಾಗಿದೆ. ಆದರೆ ಅದನ್ನು ತಯಾರಿಸಲು ಇನ್ನೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ. ಅಂತೆಯೇ ವೈರಸ್ ಸೋಂಕಿನ ಬಳಿಕ ಗುಣಮುಖರಾದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆಯೇ ಎಂಬ  ಪ್ರಶ್ನೆಗೆ ಉತ್ತರಿಸಿದ ಡಾ. ಮಾರ್ಕ್ ಲಿಪ್ಸಿಚ್ ಅವರು, ಅಂತಹ ಯಾವುದೇ ವರದಿಯನ್ನು ತಾವು ಓದಿಲ್ಲ. ಆದರೆ ಚಿಕಿತ್ಸಾ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಔಷಧಿಗಳನ್ನೂ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT