ವಿದೇಶ

ಅಪಾಯದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ 'ಕಿಮ್ ಜಾಂಗ್’ ಉನ್: ವರದಿ

Srinivas Rao BV

ಉತ್ತರ ಕೊರಿಯಾ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆರೋಗ್ಯ ಸ್ಥಿತಿ ಅಪಾಯದಲ್ಲಿದೆ ಎಂದು ತಿಳಿದುಬಂದಿದೆ. 

ಅಮೆರಿಕದ ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಏ.15 ರಂದು ತಾತನ ಹುಟ್ಟುಹಬ್ಬ ಆಚರಣೆಯ ಸಮಾರಂಭದಲ್ಲಿ ಕಿಮ್ ಜಾಂಗ್ ಉನ್   ಭಾಗಿಯಾಗಿರಲಿಲ್ಲ. ಇದು ಆತನ ಆರೋಗ್ಯ ಪರಿಸ್ಥಿತಿಯ ಮೇಲೆ ಸಾಕಷ್ಟು ಅನುಮಾನಗಳನ್ನು ಮೂಡಿಸಿದ್ದವು. 
 
ಈ ಮಾಹಿತಿಯ ಕುರಿತು ಪ್ರತಿಕ್ರಿಯೆ ನೀಡುವುದಕ್ಕೆ ಅಲ್ಲಿನ ರಾಷ್ಟ್ರೀಯ ಭದ್ರತಾ ಕೌನ್ಸಿಲ್ ನ ಅಧಿಕಾರಿ ನಿರಾಕರಿಸಿದ್ದಾರೆ. ಉತ್ತರ ಕೊರಿಯಾದಲ್ಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲ. ಪ್ರಮುಖವಾಗಿ ಅಲ್ಲಿನ ನಾಯಕತ್ವದ ವಿಷಯದಲ್ಲಿ ವರದಿ ಮಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. 

ಧೂಮಪಾನ, ಹೃದಯ, ಮೆದುಳಿಗೆ ಸಂಬಂಧಿಸಿದಂತೆ ಕಿಮ್ ಜಾಂಗ್ ಉನ್ ಆರೋಗ್ಯದ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ವದಂತಿಗಳು ಹಬ್ಬಿದ್ದವು. ಪ್ರಮುಖ ಆಚರಣೆಗಳಲ್ಲಿ ಆತನ ಉಪಸ್ಥಿತಿ ಇದ್ದೇ ಇರುತ್ತಿತ್ತು. ಆದರೆ ಈ ಬಾರಿ ಅನುಪಸ್ಥಿತಿ ಇದ್ದದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ. 

ಉತ್ತರ ಕೊರಿಯಾದ ಎರಡನೇ ಸರ್ವಾಧಿಕಾರಿಯಾಗಿದ್ದ ಕಿಮ್ ಜಾಂಗ್-Il ಸಹ 2008 ರಲ್ಲಿ ಅನಾರೋಗ್ಯದ ಕಾರಣ ತಮ್ಮ 60ನೇ ಹುಟ್ಟುಹಬ್ಬದ ಆಚರಣೆಗಳಿಂದ ದೂರ ಉಳಿದಿದ್ದರು. ನಂತರ ಆತನಿಗೆ ಪಾರ್ಶ್ವವಾಯು ತಗುಲಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಈಗ ಕಿಮ್ ಕಾಂಗ್ ಉನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವುದು ಇದೇ ಮೊದಲೇನಲ್ಲ 2014 ರಲ್ಲಿಯೂ ಕಿಮ್ ಜಾಂಗ್ ಉನ್ ನಾಪತ್ತೆಯಾಗಿದ್ದರು. ಆಗಲೂ ಆತನ ಆರೋಗ್ಯದ ಬಗ್ಗೆ ಅನುಮಾನಗಳು ಮೂಡಿದ್ದವು. ಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಆ ನಂತರ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಹೇಳಿತ್ತು.

SCROLL FOR NEXT