ವಿದೇಶ

ಕೊರೋನಾ ವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯಿಂದ ಹೃದಯಕ್ಕೆ ಅಪಾಯ: ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಎಫ್‌ಡಿಎ ಎಚ್ಚರಿಕೆ

Srinivasamurthy VN

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಬಳಕೆಯಿಂದ ಹೃದಯಕ್ಕೆ ಅಪಾಯವಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಎಫ್‌ಡಿಎ ಎಚ್ಚರಿಕೆ ನೀಡಿದೆ.

ಕೊರೋನಾ ವೈರಸ್ ಸೋಂಕಿತರಿಗೆ ನೀಡಲಾಗುತ್ತಿರುವ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅದಕ್ಕೆ ಸರಿ ಸಮನಾದ ಔಷಧಗಳನ್ನು ನೀಡುವುದರಿಂದ ರೋಗಿಗಳ ಹೃದಯದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ. ಅಧ್ಯಯನಕ್ಕಾಗಿ ಆಸ್ಪತ್ರೆಗಳಲ್ಲಿ  ಬಳಸುವುದನ್ನು ಹೊರತುಪಡಿಸಿ ಕೊರೋನಾ ವೈರಸ್ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡದಂತೆ ವೈದ್ಯರಿಗೆ ಎಚ್ಚರಿಕೆಯನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನೀಡಿದೆ.

ಮೂಲಗಳ ಪ್ರಕಾರ ನ್ಯೂಯಾರ್ಕ್‌ನ ಆಸ್ಪತ್ರೆಯೊಂದರಲ್ಲಿ 84 ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ನೀಡಲಾಗಿತ್ತು. ಅವರ ಹೃದಯ ಬಡಿತದಲ್ಲಿ ಏರಿಳಿತ ಕಂಡುಬಂದಿತ್ತು. ಈ ವಿಚಾರವನ್ನು ಅಲ್ಲಿನ ವೈದ್ಯರು ವರದಿಯೊಂದರಲ್ಲಿ ಉಲ್ಲೇಖಿಸಿದ್ದರು.  ಈ ಹಿನ್ನೆಲೆಯಲ್ಲಿ ಎಫ್‌ಡಿಎ ಎಚ್ಚರಿಕೆ ನೀಡಿದೆ.

ಇದೇ ವಿಚಾರವಾಗಿ ಅಮೆರಿಕದ ಆರೋಗ್ಯ ತಜ್ಞರ ರಾಷ್ಟ್ರೀಯ ಸಂಸ್ಥೆಯೊಂದು ಕಳೆದ ವಾರ ಸ್ಪಷ್ಟನೆ ನೀಡಿತ್ತು. ತನ್ನ ವರದಿಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಈ ಎರಡೂ ಔಷಧಗಳು ಕೆಲವೊಮ್ಮೆ ಹೃದಯ ಬಡಿತ ಅಪಾಯಕಾರಿ ಏರಿಳಿತಕ್ಕೆ ಕಾರಣವಾಗುತ್ತವೆ.  ಕೊರೋನಾ ವಿರುದ್ಧ ಹೋರಾಡುವಲ್ಲಿ ಈ ಔಷಧಗಳ ಸಾಮರ್ಥ್ಯ ಇನ್ನೂ ಸಾಬೀತಾಗಿಲ್ಲ. ಅಧ್ಯಯನ ಮತ್ತು ಸಂಶೋಧನೆಗೆ ಒಳಪಡಿಸದೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ನೀಡುವುದು ಒಳ್ಳೆಯದಲ್ಲವೆಂದು ಹೇಳಿತ್ತು ಎಂದು ಹೇಳಿದೆ.

ಇತ್ತೀಚೆಗಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಲ್ಲದು ಎಂದು ಹೇಳಿದ್ದರು. ಅಲ್ಲದೆ ಈ ಔಷಧಿಯನ್ನು ಅಮೆರಿಕಕ್ಕೆ ಹೆಚ್ಚಾಗಿ ರಫ್ತು ಮಾಡಬೇಕು ಎಂದು ಭಾರತದ ಮೇಲೆ ಒತ್ತಡ  ಕೂಡ ಹೇರಿದ್ದರು. ಭಾರತದಿಂದಲೂ ಅಮೆರಿಕಕ್ಕೆ ಈ ಔಷಧ ಭಾರಿ ಪ್ರಮಾಣದಲ್ಲಿ ರಫ್ತು ಕೂಡ ಆಗಿತ್ತು. ಬಳಿಕ ಅನೇಕ ವೈದ್ಯರು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡಿದ್ದರು. 

ಇದರ ಬೆನ್ನಲ್ಲೇ ಕೆಲವೇ ಕೆಲವು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಿ ಪರೀಕ್ಷಿಸಲು ಎಫ್‌ಡಿಎ ಕಳೆದ ತಿಂಗಳು ಅನುಮತಿ ನೀಡಿತ್ತು. ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇವನೆಯಿಂದ ಹೃದಯ ಬಡಿತದಲ್ಲಿ ಏರಿಳಿತ, ರಕ್ತದೊತ್ತಡದಲ್ಲಿ ಇಳಿಕೆ, ಸ್ನಾಯು ಅಥವಾ  ನರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

SCROLL FOR NEXT