ವಿದೇಶ

ಕೊರೋನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆ ಬಿಂಬಿಸುವುದು ಸರಿಯಲ್ಲ: ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ನವದೆಹಲಿ: ಕೊರೋನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. 

ಜಾಗತಿಕ ಪಿಡುಗಾಗಿ ಮಾರ್ಪಟ್ಟಿರುವ ಮಾರಕ ಕೊರೋನಾ ವೈರಸ್ ಲಸಿಕೆ ಕಂಡು ಹಿಡಿಯುವ ಪೈಪೋಟಿಗೆ ಬಿದ್ದಿರುವ ದೇಶಗಳು ಲಸಿಕೆ ಅಭಿವೃದ್ಧಿ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುತ್ತಿವೆ. ಇದನ್ನು ಮೊದಲು ತಡೆಯಬೇಕು. ವಿಶ್ವದ ಬಡ ದೇಶಗಳಲ್ಲಿ ಕಂಡು ಬರುವ ಕೋರೋನಾ ಸೋಂಕು ಕೊನೆಗೊಳ್ಳದೆ  ಹೋದರೆ, ಶ್ರೀಮಂತ ರಾಷ್ಟ್ರಗಳು ಸಹ ಮತ್ತೆ ಅದರ ಹಿಡಿತದಿಂದ ಪಾರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ಅಮೆರಿಕದ ಆಸ್ಪೆನ್ ಸೆಕ್ಯುರಿಟಿ ಫೋರಂನೊಂದಿಗೆ ಜಿನೀವಾದಲ್ಲಿನ WHO ನ ಪ್ರಧಾನ ಕಚೇರಿಯಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಅವರು, 'ಲಸಿಕೆ ರಾಷ್ಟ್ರೀಯತೆ" ಒಳ್ಳೆಯದಲ್ಲ, ಅದು ನಮಗೆ ಸಹಾಯ ಮಾಡುವುದಿಲ್ಲ. ನಾವು  ಜಾಗತಿಕ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಇದರಲ್ಲಿ ಎಲ್ಲಾ ದೇಶಗಳು ಪರಸ್ಪರ ಆಳವಾಗಿ ಸಂಪರ್ಕ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ವೇಗವಾಗಿ ಚೇತರಿಸಿಕೊಳ್ಳಲು ಕೊರೋನಾ ಲಸಿಕೆ ತಯಾರಿಸಲು ಜಗತ್ತು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ವಿಶ್ವದ ಕೆಲವೇ ದೇಶಗಳು ಅಥವಾ ಪ್ರದೇಶಗಳು ಮಾತ್ರ  ಈ ಕಾಯಿಲೆಯಿಂದ ಸುರಕ್ಷಿತವಾಗಿರಬೇಕು ಹಾಗೂ ಉಳಿದ ಭಾಗಗಳಲ್ಲಿ ಈ ಸೋಂಕು ಪಸರಿಸಬೇಕು ಇದು ಸಾಧ್ಯವಿಲ್ಲ. ಹೀಗೆ ಒಂದು ವೇಳೆ ನಡೆದರೆ, ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಜಾಗತಿಕ ಜನರ ಜೀವನವನ್ನು ಅಪಾಯಕ್ಕೆ ದೂಡುತ್ತಿದ್ದು, ಇದನ್ನು ತಡೆಯಲು ವಿಶ್ವದ ಶ್ರೀಮಂತ ರಾಷ್ಟ್ರಗಳು ಮುಂದಾಳತ್ವ ವಹಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
 

SCROLL FOR NEXT