ವಿದೇಶ

ಶ್ವೇತ ಭವನ ಹೊರಗೆ ಗುಂಡಿನ ಸದ್ದು: ಸುದ್ದಿಗೋಷ್ಠಿ ಅರ್ಧಕ್ಕೆ ಸ್ಥಗಿತಗೊಳಿಸಿ ಹೊರನಡೆದ ಡೊನಾಲ್ಡ್ ಟ್ರಂಪ್!

Sumana Upadhyaya

ವಾಷಿಂಗ್ಟನ್:ಶ್ವೇತಭವನದ ಹೊರಗೆ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬನ ಮೇಲೆ ರಹಸ್ಯ ಸೇವಾ ಪಡೆ ಸಿಬ್ಬಂದಿ ಗುಂಡು ಹಾರಿಸಿ ರಕ್ಷಿಸಲು ನೋಡಿರುವ ಘಟನೆ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದ ಹೊರಗೆ ನಡೆದಿದೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಹೋಗಿ ವಿಷಯ ತಿಳಿದುಕೊಂಡು ಬಂದು ಮತ್ತೆ ಸುದ್ದಿಗೋಷ್ಠಿಯನ್ನು ಮುಂದುವರಿಸಿದ್ದಾರೆ.

ನಿನ್ನೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಶ್ವೇತಭವನದ ಹೊರಗೆ ಉತ್ತರ ಭಾಗದಲ್ಲಿ ಗುಂಡಿನ ಶಬ್ದ ಕೇಳಿಸಿತ್ತು. ಕೂಡಲೇ ರಕ್ಷಣಾ ಕ್ರಮವಾಗಿ ರಹಸ್ಯ ಸೇವಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ವಯಂಚಾಲಿತ ರೈಫಲ್ ಗಳಿಂದ ಗುಂಡು ಹಾರಿಸಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೇ ನಿಲ್ಲಿಸಿ ಹೊರಗೆ ಹೋಗಿ ವಿಚಾರಿಸಿದ್ದಾರೆ. ಸ್ವಲ್ಪ ಹೊತ್ತು ಕಳೆದ ನಂತರ ವಾಪಸ್ ಬಂದು ಪತ್ರಕರ್ತರನ್ನು ಉದ್ದೇಶಿಸಿ, ಶ್ವೇತ ಭವನದ ಹೊರಗೆ ಶೂಟ್​ ಔಟ್ ಆಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ಗೆ ಧನ್ಯವಾದ ಹೇಳುತ್ತೇನೆ. ದೊಡ್ಡ ಅನಾಹುತವನ್ನು ಅವರು ಕ್ಷಿಪ್ರವಾಗಿ ತಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ಧಾರೆ. ಯಾರನ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುಶಃ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ ಹೊಡೆದುರುಳಿಸಿದ ಬಂದೂಕುಧಾರಿ ವ್ಯಕ್ತಿಯೇ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ವೇತಭವನದ ಆವರಣದಿಂದ ಹೊರಗೆ ನಡೆದ ಘಟನೆ ಇದಾಗಿದ್ದು, ಇದು ನನ್ನನ್ನು ಗುರಿಯಾಗಿಸಿದ್ದಲ್ಲ ಎಂದು ಭಾವಿಸಿದ್ದೇನೆ. ಯಾವುದೇ ರೀತಿಯಲ್ಲೂ ವೈಟ್​ಹೌಸ್​ನ ಭದ್ರತಾ ಲೋಪವಾಗಿಲ್ಲ ಎಂದು ನಂಬಿದ್ದೇನೆ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ.

ಸದ್ಯ ಶ್ವೇತಭವನದ ಹೊರಗೆ ಪರಿಸ್ಥಿತಿ ಸಹಜವಾಗಿದ್ದು ಉತ್ತರ ಭಾಗದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕೃತ ವಾಹನಗಳು ಪೆನ್ಸಿಲ್ವೇನಿಯಾ ಅವೆನ್ಯೂ 17ನೇ ರಸ್ತೆಯಲ್ಲಿ ನಿಲುಗಡೆಯಾಗಿವೆ.

SCROLL FOR NEXT