ವಿದೇಶ

ಅಧಿಕಾರಕ್ಕೆ ಬಂದರೆ ಹೆಚ್-1ಬಿ ವೀಸಾ ಪ್ರಕ್ರಿಯೆ ಸುಧಾರಣೆ:ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೊ ಬಿಡನ್ ಭರವಸೆ 

Sumana Upadhyaya

ವಾಷಿಂಗ್ಟನ್: ಮುಂದಿನ ನವೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ಬಂದರೆ ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಸುಧಾರಿಸಲಿದ್ದು ಗ್ರೀನ್ ಕಾರ್ಡ್ ಗೆ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕುವುದಾಗಿ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೊ ಬಿಡನ್ ಭರವಸೆ ನೀಡಿದ್ದಾರೆ. 

ಇದು ಭಾರತೀಯ ಮೂಲದ ಅಮೆರಿಕ ಸಮುದಾಯವನ್ನು ಚುನಾವಣೆಯಲ್ಲಿ ಓಲೈಸಲು ಜೊ ಬಿಡನ್ ಮಾಡಿರುವ ಘೋಷಣೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಹೆಚ್-1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು, ಅಮೆರಿಕದ ಕಂಪೆನಿಗಳು ತಾಂತ್ರಿಕ ಮತ್ತು ಇತರ ಕ್ಷೇತ್ರಗಳಲ್ಲಿ ವಿಶೇಷ ಪರಿಣಿತರಾಗಿರುವ ವಿದೇಶಿ ನೌಕರರನ್ನು ನೇಮಕಾತಿ ಮಾಡಲು ವಿದೇಶಿ ಉದ್ಯೋಗಿಗಳಿಗೆ ಅಮೆರಿಕ ಸರ್ಕಾರ ನೀಡುವ ವೀಸಾವಾಗಿದೆ.

ಈ ವೀಸಾ ಮೂಲಕ ಭಾರತ ಮತ್ತು ಚೀನಾ ದೇಶಗಳ ಸಾವಿರಾರು ವಿಶೇಷ ತಜ್ಞ ನೌಕರರನ್ನು ಅಮೆರಿಕದ ಕಂಪೆನಿಗಳು ನೇಮಕಾತಿ ಮಾಡುತ್ತವೆ. 

ನಿನ್ನೆ ಭಾರತ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಮೆರಿಕದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಜೊ ಬಿಡನ್, ಕುಟುಂಬ ಆಧಾರಿತ ವಲಸೆ ವ್ಯವಸ್ಥೆ ಮತ್ತು ಧಾರ್ಮಿಕ ಕೆಲಸಗಾರರ ವೀಸಾ ಪ್ರಕ್ರಿಯೆಯನ್ನು ಕೂಡ ಆರಂಭಿಸುವುದಾಗಿ ಹೇಳಿದರು. 

ಭಾರತೀಯ ಅಮೆರಿಕನ್ನರಿಗೆ ಈ ರೀತಿ ವಿಶೇಷ ನೀತಿ ದಾಖಲೆ ಆಧಾರಿತ ಘೋಷಣೆಯನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮಾಡುತ್ತಿರುವುದು ಇದೇ ಮೊದಲು ಎನ್ನಬಹುದು. ಅಮೆರಿಕದ 8 ರಾಜ್ಯಗಳಲ್ಲಿ ಸುಮಾರು 13 ಲಕ್ಷ ಅರ್ಹ ಭಾರತೀಯ ಅಮೆರಿಕನ್ ಮತದಾರರಿದ್ದಾರೆ. 

SCROLL FOR NEXT