ವಿದೇಶ

ದಾವೂದ್ ಪಾಕಿಸ್ತಾನದಲ್ಲಿಲ್ಲ, ಮಾಧ್ಯಮಗಳ ವರದಿ ಸುಳ್ಳು; ಯೂಟರ್ನ್‌ ಹೊಡೆದ ಪಾಕ್ ಸರ್ಕಾರ

Srinivasamurthy VN

ನವದೆಹಲಿ: ಭೂಗತ ಪಾತಕಿ ಮತ್ತು ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಆತನೂ ಸೇರಿದಂತೆ 88 ಉಗ್ರರ ವಿರುದ್ಧದ ನಿರ್ಬಂಧಗಳನ್ನು ಹೆಚ್ಚಿಸಿರುವುದಾಗಿ ಹೇಳಿದ್ದ ಪಾಕಿಸ್ತಾನ ಇದೀಗ ಯೂ ಟರ್ನ್ ಹೊಡೆದಿದ್ದು, ದಾವೂದ್ ಪಾಕಿಸ್ತಾನದಲ್ಲಿ ಇಲ್ಲ. ಮಾಧ್ಯಮಗಳ ವರದಿ  ಸುಳ್ಳು ಎಂದು ಹೇಳಿದೆ. 

ನಿನ್ನೆಯಷ್ಟೇ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-ಎಫ್‌ಎಟಿಎಫ್) ತನ್ನನ್ನು ಕಪ್ಪು ಪಟ್ಟಿಗೆ ಸೇರಿಸುವ ಭೀತಿಯಿಂದ ದಾವೂದ್ ಇಬ್ರಾಹಿಂ, ಹಫೀಜ್ ಸಯ್ಯೀದ್, ಮಸೂದ್ ಅಜರ್ ಸೇರಿದಂತೆ 88 ಉಗ್ರರ ಮೇಲಿನ ನಿರ್ಬಂಧ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದ ಪಾಕಿಸ್ತಾನ, ಈ ವಿಚಾರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಇದೀಗ ಯೂಟರ್ನ್ ಹೊಡೆದಿದೆ. 

ಪಾಕಿಸ್ತಾನದಲ್ಲಿ ದಾವೂದ್ ನೆಲೆ ಇರುವ ಕುರಿತು ತಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಈ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು ಮತ್ತು ಆಧಾರರಹಿತವಾದದ್ದು ಎಂದು ಹೇಳಿದೆ. 

ಇದಕ್ಕೂ ಮುನ್ನ ಪಾಕ್‌ ವಿಶ್ವಸಂಸ್ಥೆ ಘೋಷಿತ ಉಗ್ರರ ಪಟ್ಟಿಯನ್ನು ಪ್ರಕಟಿಸಿತ್ತು. ಅವರೆಲ್ಲರ ಆಸ್ತಿ ಜಪ್ತಿ ಮಾಡಿ, ಪ್ರಯಾಣ ನಿಷೇಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪ್ರಕಟಿಸಿತ್ತು. ಜೊತೆಗೆ, 2020ರ ಆ.18ರಂದು ಐಎಸ್‌ಐಎಲ್‌ ಮತ್ತು ಅಲ್‌-ಖೈದಾ ಮಂಜುರಾತಿ ಸಮಿತಿಯ ಅನುಮತಿ ಪ್ರಕಾರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿತ್ತು.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-ಎಫ್‌ಎಟಿಎಫ್) 2018 ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿತ್ತು. 2019 ರ ಅಂತ್ಯದ ವೇಳೆಗೆ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ಗಡುವನ್ನು ನಂತರ ಫತ್ಫ್ ವಿಸ್ತರಿಸಿತು. 

ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಅಜರ್, ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಅವರ ಮೇಲೆ ನಿರ್ಬಂಧ ವಿಧಿಸುವ ಹಿನ್ನಲೆಯಲ್ಲಿ ಅಗಸ್ಟ್ 18 ರಂದು ನೋಟಿಸ್ ಹೊರಡಿಸಿತ್ತು. ಬಹು ಅಕ್ರಮ ವ್ಯವಹಾರದ ಮುಖ್ಯಸ್ಥರಾಗಿರುವ ದಾವೂದ್ ಇಬ್ರಾಹಿಂ 1993 ರ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಣೆ ಮಾಡಲಾಗಿತ್ತು. 

SCROLL FOR NEXT