ವಿದೇಶ

ಜಗತ್ತಿನಲ್ಲೇ ಮೊದಲ ಪ್ರಕರಣ: ಕೊರೋನಾದಿಂದ ಗುಣಮುಖರಾಗಿದ್ದ ಇಬ್ಬರಿಗೆ ಮತ್ತೆ ಒಕ್ಕರಿಸಿದ 2 ಪ್ರಬೇಧದ ಸೋಂಕು

Srinivasamurthy VN

ಲಂಡನ್: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಬಳಿಕ ಗುಣಮುಖನಾಗಿದ್ದ ವ್ಯಕ್ತಿಯೋರ್ವ ಮತ್ತೆ ಸೋಂಕಿಗೆ ತುತ್ತಾಗಿರುವ ಜಗತ್ತಿನ ಮೊದಲ ಪ್ರಕರಣ ಹಾಂಕಾಂಗ್ ನಲ್ಲಿ ವರದಿಯಾಗಿದೆ.

ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಗುಣಮುಖನಾಗಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ಮತ್ತೊಮ್ಮೆ ಸೋಂಕು ಒಕ್ಕರಿಸಿದೆ. ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ ನಿಮಿತ್ತ ಯೂರೋಪ್​ಗೆ ತೆರಳಿದ್ದ ಈ  ಸಾಫ್ಟ್​ವೇರ್​ ಉದ್ಯೋಗಿ ತಾಯ್ನಾಡಿಗೆ ಮರಳಿಬಂದ ವೇಳೆ ಆತನಲ್ಲಿ ಮತ್ತೊಮ್ಮೆ ಸೋಂಕು ಪತ್ತೆಯಾಗಿದೆ. ತವರಿಗೆ ಬಂದ ಟೆಕ್ಕಿಯನ್ನು ತಪಾಸಣೆ ನಡೆಸಿದ ಹಾಂಗ್​ಕಾಂಗ್ ವಿಶ್ವವಿದ್ಯಾಲಯದ ಸಂಶೋಧನಾಕಾರರಿಗೆ ಆತನಲ್ಲಿ ರೋಗ ಲಕ್ಷಣ ರಹಿತ ಸೋಂಕು ಇರುವುದು ಪತ್ತೆಯಾಗಿದೆ. ಈ ರೀತಿ ಒಮ್ಮೆ  ಸೋಂಕಿನಿಂದ ಗುಣಮುಖನಾಗಿ ಮತ್ತೆ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ಪ್ರಕರಣ ಇದು ಎಂದು ತಜ್ಞರು ಹೇಳಿದ್ದಾರೆ.

ಎರಡನೇ ಬಾರಿ ಕೊರೊನಾ ಪಾಸಿಟಿವ್​ ಆದ ಸೋಂಕಿತನಲ್ಲಿ ಕೊರೊನಾದ ಯಾವುದೇ ಗುಣಲಕ್ಷಣ ಕಂಡುಬಂದಿಲ್ಲ. ಈತನ ಮೇಲೆ ಪರೀಕ್ಷೆ ನಡೆಸಿದ ವೈದ್ಯರಿಗೆ ಟೆಕ್ಕಿಗೆ ಕೊರೊನಾದ ಎರಡು ಪ್ರಭೇದಗಳು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಜೊತೆಗೆ, ಮನುಷ್ಯನನ್ನ ಪದೇ ಪದೇ ಕಾಡುವ ಸಾಮಾನ್ಯ  ಶೀತದಂತೆ ಈ ಕೊರೊನಾ ವೈರಸ್ ಸಹ ಮತ್ತೊಮ್ಮೆ ತಗುಲುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದ್ದಾರೆ.

ಅಂತೆಯೇ ಕೊರೋನಾ ವೈರಸ್ ಪ್ರತೀ ತಿಂಗಳಿಗೆ ಒಮ್ಮೆ ರೂಪಾಂತರಗೊಳ್ಳುತ್ತಿರುತ್ತದೆ. ಹೀಗೆ ರೂಪಾಂತರಗೊಂಡ ವೈರಸ್ ಪ್ರಬಲವೂ ಆಗಬಹುದು ಅಥವಾ ಅದರ ಶಕ್ತಿ ದುರ್ಬಲವೂ ಆಗಬಹುದು. ಅಂತೆಯೇ ಅದರ ರೋಗಲಕ್ಷಣಗಳಲ್ಲೂ ಬದಲಾವಣೆ ಕಂಡುಬರಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಕೊಲ್ಕತ್ತಾ ಮೂಲದ ಜನೋಮಿಕ್ಸ್ ಸಂಸ್ಥೆ ಸಂಶೋಧನೆ ನಡೆಸಿತ್ತು. ಕೊರೋನಾ ವೈರಸ್ ನ ವಿವಿಧ ರೂಪಗಳನ್ನು ಪರಿಚಯಿಸಿತ್ತು, ವಿಜ್ಞಾನಿಗಳಾದ ನಿಧಾನ್ ಬಿಸ್ವಾಸ್ ಮತ್ತು ಪಾರ್ಥಾ ಮಜುಂದಾರ್ ನಡೆಸಿದ ಸಂಶೋಧನೆಯಲ್ಲಿ 10 ವಿಧದಲ್ಲಿ ಕೊರೋನಾ ವೈರಸ್ ರೂಪಾಂತರ ಹೊಂದುತ್ತಿರುವುದು ಬೆಳಕಿಗೆ ಬಂದಿತ್ತು. ಈ 10 ಪ್ರಬೇಧದ ಕೊರೋನಾ ವೈರಸ್ ಗಳ ಪೈಕಿ ಆತಂಕಕಾರಿ ಅಥವಾ ಪ್ರಬಲ ಎನಿಸಿರುವುದು A2a ಕೊರೋನಾ ವೈರಸ್. ಇದು ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ.

ಭಾರತದಲ್ಲಿ 35 ಜನರಿಗೆ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 16 ಜನರಲ್ಲಿ A2a ವೈರಸ್ ಪತ್ತೆಯಾಗಿದೆ. ಭಾರತದಲ್ಲಿ ಶೇಕಡ 47 ರಷ್ಟು ಜನರಲ್ಲಿ A2a ವೈರಸ್ ಪತ್ತೆಯಾಗಿದೆ. 55 ದೇಶಗಳ 3636 ಆರ್.ಎನ್.ಎ. ಪರೀಕ್ಷೆ ಮಾಡಲಾಗಿದ್ದು ಇವರಲ್ಲಿ 1848 ಮಂದಿಯಲ್ಲಿ ಎ2ಎ ವೈರಸ್ ಕಂಡು ಬಂದಿದೆ. ಜಾಗತಿಕವಾಗಿ ಶೇಕಡ 50 ಜನರಲ್ಲಿ ಎ2ಎ ವೈರಸ್ ಪತ್ತೆಯಾಗಿದೆ. ಉಳಿದವರಲ್ಲಿ O, A2, A2a, A3, B, B1 ರೂಪಾಂತರದ ವೈರಸ್ ಪತ್ತೆಯಾಗಿದೆ.ಮಾರ್ಚ್ ತಿಂಗಳ ಅಂತ್ಯದಲ್ಲಿ A2a ವೈರಸ್ ಅಭಿವೃದ್ಧಿ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದರು.

ಇದಲ್ಲದೆ, ಸೋಂಕಿತನು ಕೊರೊನಾದ ಗುಣಲಕ್ಷಣಗಳನ್ನ ತೋರಿಸದೆ ಇದ್ದರೂ ತನ್ನಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಜೊತೆಗೆ, ಕೊರೊನಾದಿಂದ ಗುಣಮುಖರಾದವರಿಗೆ ಮತ್ತೊಮ್ಮೆ ವೈರಸ್​ ವಕ್ಕರಿಸುವ ಸಾಧ್ಯತೆ ಅವರವರ ರೋಗ ನಿರೋಧಕ ಶಕ್ತಿ  ಮತ್ತು ಎರಡನೇ ಬಾರಿ ಅಟ್ಯಾಕ್​ ಮಾಡುವ ವೈರಸ್​ನ ಪ್ರಭೇದದ ಮೇಲೆ ನಿಶ್ಚಯವಾಗಲಿದೆ ಎಂದು ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಥಾಮಸ್​ ಫೈಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಲ್ಜಿಯಂ ಮತ್ತು ನೆದರ್ಲೆಂಡ್ ನಲ್ಲೂ 2 ಪ್ರಬೇಧದ ಸೋಂಕು
ಹಾಂಕಾಂಗ್ ಮಾತ್ರವಲ್ಲೇ ಬೆಲ್ಜಿಯಂ ಮತ್ತು ನೆದರ್ಲೆಂಡ್ ನ ಇಬ್ಬರು ನಿವಾಸಿಗಳಲ್ಲೂ 2 ಪ್ರಬೇಧದ ಸೋಂಕು ಒಕ್ಕರಿಸಿದ್ದು, ಬೆಲ್ಜಿಯಂನ ಮಹಿಳೆಯಲ್ಲಿ ಇಂತಹ ಮಾದರಿ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಮಾರ್ಚ್ ನಲ್ಲಿ ಆಕೆ ಸೋಂಕಿಗೆ ತುತ್ತಾಗಿ ಬಳಿಕ ಗುಣಮುಖರಾಗಿದ್ದರು. ಬಳಿಕ ಜೂನ್ ನಲ್ಲಿ ಮತ್ತೆ ಸೋಂಕಿಗೆ ತುತ್ತಾಗಿದ್ದರು. ನೆದರ್ಲೆಂಡ್ ನಲ್ಲೂ ಇಂತಹುದೇ ರೀತಿಯ ಸೋಂಕು ಪ್ರಕರಣ ಪತ್ತೆಯಾಗಿದೆ.

SCROLL FOR NEXT