ವಿದೇಶ

ಶ್ವೇತಭವನದಲ್ಲಿ ಅಮೆರಿಕ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್

Sumana Upadhyaya

ವಾಷಿಂಗ್ಟನ್: ಎಲ್ಲಾ ಧರ್ಮ, ಪಂಥ, ವರ್ಣಕ್ಕೆ ಸಮಾನತೆ ನೀಡುವ ಸಂದೇಶ ರವಾನಿಸುವ ಪ್ರಯತ್ನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದು ಶ್ವೇತಭವನದಲ್ಲಿ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕ ಪ್ರಜೆಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಮೆರಿಕ ಪ್ರಜೆಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ನ್ಯಾಚುರಲೈಸೇಷನ್ ಸೆರೆಮನಿ ಎಂದು ಕರೆಯುತ್ತಾರೆ, ಈ ಸಮಾರಂಭ ನಿನ್ನೆ ಶ್ವೇತಭವನದಲ್ಲಿ ನೆರವೇರಿತ್ತು. ಸಮಾರಂಭದ ವಿಡಿಯೊವನ್ನು ರಿಪಬ್ಲಿಕನ್ ನ್ಯಾಶನಲ್ ಸಭೆಯಲ್ಲಿ ಪ್ರಸಾರ ಮಾಡಲಾಯಿತು.

ಭಾರತ, ಬೊಲಿವಿಯಾ, ಲೆಬನಾನ್, ಸೂಡನ್ ಮತ್ತು ಘಾನಾ ದೇಶಗಳ ಐವರು ವಲಸಿಗರು ಅಮೆರಿಕ ಪ್ರಜೆಗಳಾಗಿ ಪ್ರಮಾಣವಚನ ಸ್ವೀಕರಿಸಿಕೊಂಡರು.

ತಮ್ಮ ಬಲಗೈಯನ್ನು ಮೇಲಕ್ಕೆತ್ತಿ, ಎಡಗೈಯಲ್ಲಿ ಅಮೆರಿಕದ ಧ್ವಜವನ್ನು ಹಿಡಿದುಕೊಂಡ ಅವರಿಗೆ ಹೋಮ್ ಲ್ಯಾಂಡ್ ಸೆಕ್ಯುರಿಟಿ ಚಾಡ್ ವೊಲ್ಫ್ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಟ್ರಂಪ್ ಹಾಜರಿದ್ದರು.ಐವರಲ್ಲಿ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಸುಧಾ ಸುಂದರಿ ನಾರಾಯಣನ್ ಸೇರಿದ್ದಾರೆ.

ಐವರು ಅಮೆರಿಕ ಪ್ರಜೆಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಮಗೆ ನಮ್ಮ ಕುಟುಂಬಕ್ಕೆ ಸ್ವಾಗತ, ಈ ದೇಶಕ್ಕೆ ಬಂದು ಇಲ್ಲಿನ ಸಾಂಸ್ಕೃತಿಕ, ಆರ್ಥಿಕ ಬೆಳವಣಿಗೆಗೆ ನಿಮ್ಮ ಕೊಡುಗೆ ಸಾಕಷ್ಟಿದೆ. ಇದೊಂದು ಅತ್ಯಪೂರ್ವ ಸಮಯ ಎಂದು ಡೊನಾಲ್ಡ್ ಟ್ರಂಪ್ ಸಮಾರಂಭದಲ್ಲಿ ಹೇಳಿದರು.

ಸುಧಾ ಸುಂದರಿ ನಾರಾಯಣ್ ಭಾರತದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ 13 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರೊಬ್ಬ ಪ್ರತಿಭಾವಂತ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಅವರು ಮತ್ತು ಅವರ ಪತಿ ಇಲ್ಲಿದ್ದು ಇಬ್ಬರು ಮುದ್ದಾದ ಮಕ್ಕಳನ್ನು ಬೆಳೆಸುತ್ತಿದ್ದಾರೆ ಎಂದು ಅಧ್ಯಕ್ಷ ಟ್ರಂಪ್ ಶ್ಲಾಘಿಸಿದರು.

ಹೊಳೆಯುವ ಹವಳ ಗುಲಾಬಿ ಬಣ್ಣದ ಸೀರೆ ತೊಟ್ಟಿದ್ದ ಸುಧಾ ಅವರಿಗೆ ಟ್ರಂಪ್ ಅಮೆರಿಕ ನಾಗರಿಕತ್ವ ಪ್ರಮಾಣಪತ್ರ ನೀಡಿದರು.

SCROLL FOR NEXT