ವಿದೇಶ

ಬಾಂಗ್ಲಾದೇಶದಲ್ಲಿ ಪ್ರವಾಹ: ಸಾವಿನ ಸಂಖ್ಯೆ 251 ಕ್ಕೆ ಏರಿಕೆ

Srinivasamurthy VN

ಢಾಕಾ: ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಗಳಿಂದಾಗಿ ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಒಟ್ಟು 251 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಸೇವೆಗಳ ನಿರ್ದೇಶನಾಲಯದ ಅಧೀನದಲ್ಲಿರುವ ದೇಶದ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ನಿಯಂತ್ರಣಾ ಕೊಠಡಿಯ ದೈನಂದಿನ ಪ್ರವಾಹ ವರದಿಯಂತೆ, ಜೂನ್ 30 ರಿಂದ ಬಾಂಗ್ಲಾದೇಶದ 33 ಜಿಲ್ಲೆಗಳಲ್ಲಿ ಮೂರು ಬಾರಿ ವಿನಾಶಕಾರಿ ಪ್ರವಾಹಗಳು ಉಂಟಾಗಿ ಅಪಾರ ಸಾವು-ನೋವಿಗೆ  ಕಾರಣವಾಗಿದೆ.

ಹೆಚ್ಚಿನ ನತದೃಷ್ಟರು ಪ್ರವಾಹದ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಇನ್ನೂ ಕೆಲವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವು ಕಡಿತ ಮತ್ತು ಮಿಂಚು ಹೊಡೆದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಒಟ್ಟಾರೆ ಪ್ರವಾಹ ಪರಿಸ್ಥಿತಿಯು ಹೆಚ್ಚಿನ ಜಿಲ್ಲೆಗಳಲ್ಲಿ ಸುಧಾರಣೆಯಾಗಿದೆ. ಅನೇಕ ನದಿಗಳಲ್ಲಿ  ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಪ್ರವಾಹದ ನೀರು ಕಡಿಮೆಯಾಗುತ್ತಲೇ ಇರುವುದರಿಂದ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಬಾಂಗ್ಲಾದೇಶದ ಜಲ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸರ್ದರ್ ಉದೋಯ್ ರೈಹಾನ್ ತಿಳಿಸಿದ್ದಾರೆ.

ಕಳೆದ ಜೂನ್‌ನಿಂದ ಭಾರಿ ಮಳೆಯಾಗುತ್ತಿದ್ದು, ಬೆಟ್ಟಗಳಿಂದ ಹರಿದು ಬರುವ ನೀರಿನಿಂದ ಪ್ರವಾಹಗಳು ಉಂಟಾಗಿ ಸಾವು-ನೋವು ಮತ್ತು ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವಾಲಯದ ಅಧೀನದಲ್ಲಿರುವ ದೇಶದ ರಾಷ್ಟ್ರೀಯ ವಿಪತ್ತು  ಪ್ರತಿಕ್ರಿಯೆ ಸಮನ್ವಯ ಕೇಂದ್ರ (ಎನ್‌ಡಿಆರ್‌ಸಿಸಿ) ಸಿದ್ಧಪಡಿಸಿದ ದೈನಂದಿನ ವಿಪತ್ತು ಪರಿಸ್ಥಿತಿ ವರದಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸಾವಿರಾರು ಕುಟುಂಬಗಳು ಮನೆಗಳನ್ನು ತೊರೆದಿದ್ದಾರೆ. ಬಾಂಗ್ಲಾದೇಶದ ಪ್ರವಾಹದಿಂದಾಗಿ ಸುಮಾರು 156.4 ದಶಲಕ್ಷ ಡಾಲರ್  ಮೊತ್ತದ ಕೃಷಿ ಬೆಳೆ ನಷ್ಟವಾಗಿದೆ ಎಂದು ಹೇಳಲಾಗಿದೆ. 

SCROLL FOR NEXT