ವಿದೇಶ

ಮತ್ತೆ ಗೂಗಲ್ ಮೇಲ್ ಸೇವೆಯಲ್ಲಿ ವ್ಯತ್ಯಯ; ಎರಡೂವರೆ ತಾಸಿನ ಬಳಿಕ ಪುನಃಸ್ಥಾಪನೆ

Srinivasamurthy VN

ವಾಷಿಂಗ್ಟನ್: ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ನ ಜಿಮೇಲ್ ಸೇವೆ ಇಂದು ಪುನ: ಕೈ ಕೊಟ್ಟಿದ್ದು ಬರೊಬ್ಬರಿ 2.5 ಗಂಟೆಗಳ ಕಾಲ ಜಿಮೇಲ್ ಸೇವೆ ಸ್ಥಗಿತವಾಗಿತ್ತು. 

ಹೌದು.. ಗೂಗಲ್ ನ ಖ್ಯಾತ ಸೇವೆಗಳಲ್ಲಿ ಒಂದಾಗಿರುವ ಜಿಮೇಲ್ ಸೇವೆ ಕೆಲ ಗಂಟೆಗಳ ಕಾಲ ಸ್ಥಗಿತವಾಗಿತ್ತು. ಜಿಮೇಲ್ ಮೇಲ್ ತೆರೆದರೆ "550-5.1.1 The email account that you tried to reach does not exist." ಎಂಬ ಸಂದೇಶ ಪರದೆ  ಮೇಲೆ ಮೂಡುತ್ತಿತ್ತು. ಈ ಬಗ್ಗೆ ಬಳಕೆದಾರರು ಗೂಗಲ್‌ಗೆ ದೂರು ಸಲ್ಲಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಗೂಗಲ್ ಜಿ-ಮೇಲ್ ಸೇವೆಗೆ ಅಡಚಣೆಯಾಗಿದ್ದು, ಸುಮಾರು ಎರಡೂವರೆ ತಾಸುಗಳ ಬಳಿಕ ಪುನಃಸ್ಥಾಪಿಸಲಾಗಿದೆ.

ಬಳಕೆದಾರರಿಗೆ ಎದುರಾಗಿರುವ ಅನಾನುಕೂಲತೆಗಾಗಿ ಕ್ಷಮಿಯಾಚಿಸುತ್ತೇವೆ. ನಿಮ್ಮ ತಾಳ್ಮೆ ಹಾಗೂ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಗೂಗಲ್ ಸ್ಟೇಟಸ್ ಡ್ಯಾಶ್‌ಬೋರ್ಡ್ ನೋಟಿಸ್‌ನಲ್ಲಿ ತಿಳಿಸಿದೆ. ಸಿಸ್ಟಂ ವಿಶ್ವಾಸಾರ್ಹತೆಯು ಗೂಗಲ್‌ನಲ್ಲಿ ಮೊದಲ ಆದ್ಯತೆಯಾಗಿದೆ.  ಹಾಗೆಯೇ ನಮ್ಮ ಸಿಸ್ಟಂಗಳನ್ನು ಉತ್ತಮಗೊಳಿಸಲು ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗಿದ್ದರೂ ಎಷ್ಟು ಬಳಕೆದಾರರಿಗೆ ತೊಂದರೆ ಎದುರಾಗಿದೆ ಎಂಬುದರ ಬಗ್ಗೆ ವಿವರವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಹಾಗೆಯೇ ಅಡಚಣೆಯ ಹಿಂದಿನ ನಿಖರ ಕಾರಣವನ್ನು ತಿಳಿಸಿಲ್ಲ. ಇದೇ ಸೋಮವಾರದಂದು ಗೂಗಲ್ ಸೇವೆಗಳಲ್ಲಿ ಭಾರಿ ಅಡಚಣೆಯಾಗಿತ್ತು. ಗೂಗಲ್ ಸರ್ಚ್ ಎಂಜಿನ್,  ಜಿ-ಮೇಲ್, ಯೂಟ್ಯೂಬ್ ಸೇರಿದಂತೆ ಪ್ರಮುಖ ಸೇವೆಗಳು ಸ್ಥಗಿತವಾಗಿ ಬಳಕೆದಾರರಿಗೆ ತೊಂದರೆ ಎದುರಾಗಿತ್ತು.

SCROLL FOR NEXT