ವಿದೇಶ

ಭಾರತದ ರೈತರ ಪ್ರತಿಭಟನೆ: ಧ್ವನಿ ಎತ್ತುವಂತೆ ಅಮೆರಿಕದ ಏಳು ಸಂಸದರಿಂದ ಮೈಕ್ ಪೊಂಪಿಯೋಗೆ ಪತ್ರ!

Srinivas Rao BV

ವಾಷಿಂಗ್ ಟನ್: ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ವಿಷಯವನ್ನು ತಮ್ಮ ಭಾರತೀಯ ಸಹೋದ್ಯೋಗಿಯೊಂದಿಗೆ ಪ್ರಸ್ತಾಪಿಸಬೇಕು ಎಂದು ಭಾರತೀಯ-ಅಮೆರಿಕನ್ ಕಾಂಗ್ರೆಸ್ ವುಮನ್ ಪ್ರಮೀಲಾ ಜಯಪಾಲ್ ಸೇರಿದಂತೆ ಅಮೆರಿಕದ ಏಳು ಪ್ರಭಾವಿ ಸಂಸದರ ಗುಂಪು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರಿಗೆ ಪತ್ರ ಬರೆದಿದೆ. 

ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ವಿದೇಶಿ ನಾಯಕರು ಮತ್ತು ರಾಜಕಾರಣಿಗಳ ಹೇಳಿಕೆಯನ್ನು ಭಾರತವು "ಅನಪೇಕ್ಷಿತ" ಮತ್ತು "ಅನಗತ್ಯ" ಎಂದು ಕರೆದಿದ್ದು, ಇದು ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಭಾರತ ಹೇಳಿದೆ.

ಭಾರತದ ರೈತರಿಗೆ ಸಂಬಂಧಿಸಿ ನಾವು ಕೆಲವು ಅನಪೇಕ್ಷಿತ ಪ್ರತಿಕ್ರಿಯೆಗಳನ್ನು ನೋಡಿದ್ದೇವೆ, ಇಂತಹ ಪ್ರತಿಕ್ರಿಯೆಗಳು ಅನಗತ್ಯ, ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇದು ಅನಗತ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ಇದು ಪಂಜಾಬ್‌ ಗೆ ಸಂಬಂಧಿಸಿರುವ ಸಿಖ್ ಅಮೆರಿಕನ್ನರಿಗೆ ಸೇರಿದ ಸಮಸ್ಯೆಯಾಗಿದೆ, ಮಾತ್ರವಲ್ಲ ಇತರ ಭಾರತೀಯ ರಾಜ್ಯಗಳಿಗೆ ಸೇರಿದ ಭಾರತೀಯ ಅಮೆರಿಕನ್ನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಂಸದರು ಡಿಸೆಂಬರ್ 23 ರಂದು ಪೊಂಪಿಯೊಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅನೇಕ ಭಾರತೀಯ ಅಮೆರಿಕನ್ನರು ಪಂಜಾಬ್‌ ನಲ್ಲಿ ಕುಟುಂಬ ಸದಸ್ಯರು ಮತ್ತು ಪೂರ್ವಜರ ಭೂಮಿಯನ್ನು ಹೊಂದಿರುವುದರಿಂದ ಮತ್ತು ಭಾರತದಲ್ಲಿ ಅವರ ಕುಟುಂಬಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ನೇರವಾಗಿ ಈ ಕಾಯ್ದೆಗಳು ಪರಿಣಾಮ ಬೀರುತ್ತವೆ. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಿಮ್ಮ ಸಹೋದ್ಯೋಗಿಯನ್ನು ಸಂಪರ್ಕಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಮತ್ತು ವಿದೇಶಗಳಲ್ಲಿ ರಾಜಕೀಯ ವಾಕ್ ಸ್ವಾತಂತ್ರ್ಯಕ್ಕೆ ರಾಜ್ಯಗಳ ಬದ್ಧತೆಯನ್ನು ಪುನರುಚ್ಚರಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ರಾಜಕೀಯ ಪ್ರತಿಭಟನೆಗಳಿಗೆ ಸಹಮತ ವ್ಯಕ್ತಪಡಿಸುವ ರಾಷ್ಟ್ರವಾಗಿ ಅಮೆರಿಕ, ತಮ್ಮ ಪ್ರಸ್ತುತ ಸಾಮಾಜಿಕ ಅವಾಂತರದ ಅವಧಿಯಲ್ಲಿ ಭಾರತಕ್ಕೆ ಸಲಹೆಗಳನ್ನು ನೀಡಬೇಕು ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

"ರಾಷ್ಟ್ರೀಯ ಸಂಸದರಾಗಿ, ಅಸ್ತಿತ್ವದಲ್ಲಿರುವ ಕಾನೂನಿಗೆ ಅನುಸಾರವಾಗಿ, ರಾಷ್ಟ್ರೀಯ ನೀತಿಯನ್ನು ನಿರ್ಧರಿಸುವ ಭಾರತ ಸರ್ಕಾರದ ಹಕ್ಕನ್ನು ನಾವು ಗೌರವಿಸುತ್ತೇವೆ. ಅನೇಕ ಭಾರತೀಯ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರಸ್ತುತ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಭಾರತ ಮತ್ತು ವಿದೇಶಗಳಲ್ಲಿರುವವರ ಹಕ್ಕುಗಳನ್ನು ನಾವು ಅಂಗೀಕರಿಸುತ್ತೇವೆ. ಇದು ಅವರ ಆರ್ಥಿಕ ಭದ್ರತೆಯ ಮೇಲೆ ದಾಳಿ ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 

ಸೆಪ್ಟೆಂಬರ್‌ ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಪಂಜಾಬ್, ಹರಿಯಾಣ ಮತ್ತು ಇತರ ಹಲವಾರು ರಾಜ್ಯಗಳ ಸಾವಿರಾರು ರೈತರು ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಯಪಾಲ್ ಜೊತೆಗೆ, ಈ ಪತ್ರಕ್ಕೆ ಕಾಂಗ್ರೆಸ್ಸಿಗರಾದ ಡೊನಾಲ್ಡ್ ನಾರ್ಕ್ರಾಸ್, ಬ್ರೆಂಡನ್ ಎಫ್ ಬೊಯೆಲ್, ಬ್ರಿಯಾನ್ ಫಿಟ್ಜ್‌ ಪ್ಯಾಟ್ರಿಕ್, ಮೇರಿ ಗೇ ಸ್ಕ್ಯಾನ್ಲಾನ್, ಡೆಬ್ಬಿ ಡಿಂಗಲ್ ಮತ್ತು ಡೇವಿಡ್ ಟ್ರೋನ್ ಸಹಿ ಹಾಕಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಒಂದು ಡಜನ್‌ ಗೂ ಹೆಚ್ಚು ಯುಎಸ್ ಕಾಂಗ್ರೆಸ್ಸಿಗರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

SCROLL FOR NEXT