ವಿದೇಶ

ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ: ವರದಿ

Srinivasamurthy VN

ದುಬೈ: ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಹೊಸ ಸಾಮುದಾಯಿಕ ಕಾರ್ಯಕ್ರಮದ ಭಾಗವಾಗಿ ಇದೇ ಜನವರಿ 1 ರಿಂದ ಪ್ರತೀ ತಿಂಗಳು ಭಾರತ ಮೂಲದ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಲ್ಲಿ ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ. ದುಬೈ ಮತ್ತು ಉತ್ತರ ಎಮಿರೇಟ್ಸ್‌ನಲ್ಲಿ  ಭಾರತೀಯ ವಲಸಿಗರನ್ನು ಪೂರೈಸುವ ಭಾರತೀಯ ರಾಯಭಾರ ಕಚೇರಿ, ಯುಎಇಯ ಭಾರತೀಯರಿಗೆ ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರ (ಪಿಬಿಎಸ್‌ಕೆ) ಸಹಯೋಗದೊಂದಿಗೆ 'ಬ್ರೇಕ್‌ಫಾಸ್ಟ್ ವಿತ್ ಕಾನ್ಸುಲ್ ಜನರಲ್' ಕಾರ್ಯಕ್ರಮ ಆಯೋಜಿಸಿದೆ.

ಈ ಬಗ್ಗೆ ಮಾತನಾಡಿರುವ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು, ಈ ಕಾರ್ಯಕ್ರಮವು ಆರ್ಥಿಕ ಸಾಕ್ಷರತೆ ಮತ್ತು ಯೋಜನೆ, ಹೊಸ ಕೌಶಲ್ಯಗಳು, ಆರೋಗ್ಯ ತಪಾಸಣೆ, ಪಿಬಿಎಸ್ ಕೆ ನೀಡುವ ಸೇವೆಗಳು ಮತ್ತು ಇತರ ಮಾಹಿತಿಯ ಬಗ್ಗೆ ಬ್ಲೂ-ಕಾಲರ್ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು  ಹೊಂದಿದೆ. ಕಾನ್ಸುಲ್ ಜನರಲ್ ಸಹವರ್ತಿ ಭಾರತೀಯರೊಂದಿಗೆ ಅವರ ವಸತಿಗೃಹದಲ್ಲಿ ಉಪಾಹಾರ ಸೇವಿಸಲಿದ್ದು, ಎಲ್ಲಾ ಕೋವಿಡ್-19 ಸುರಕ್ಷತಾ ಮಾನದಂಡಗಳು ಈ ವೇಳೆ ಜಾರಿಯಲ್ಲಿರಲಿವೆ ಎಂದು ಹೇಳಿದರು. 

ಈ ಯೋಜನೆಯ ಮೊದಲ ಕಾರ್ಯಕ್ರಮವು ಜನವರಿ 1 ಅಂದರೆ ಇದೇ ಶುಕ್ರವಾರ ದುಬೈ ನ ಲಾರ್ಸೆನ್ ಮತ್ತು ಟೂಬ್ರೊ ವಸತಿ ಸೌಕರ್ಯದಲ್ಲಿ ನಡೆಯಲಿದೆ ಎಂದು ಹೇಳಿದರು, ಈ ಯೋಜನೆಯಂತೆ ದುಬೈನ ಭಾರತದ ರಾಯಭಾರ ಅಧಿಕಾರಿ ಡಾ.ಅಮನ್ ಪುರಿ ಅವರು ಪ್ರತಿ ತಿಂಗಳು ಕಾರ್ಮಿಕರ ವಸತಿ  ಸೌಕರ್ಯಗಳಿಗೆ ಭೇಟಿ ನೀಡಲಿದ್ದಾರೆ. ಕಾರ್ಮಿಕರು ಸ್ವದೇಶದಲ್ಲಿದ್ದಾರೆ ಎಂಬ ಭಾವನೆಯನ್ನು ನಾವು ಅವರಿಗೆ ನೀಡಲು ಬಯಸುತ್ತೇವೆ ಎಂದು ಇದೇ ವೇಳೆ ಮಾತನಾಡಿದ ಅಮನ್ ಪುರಿ ಹೇಳಿದರು.  

ಭಾರತೀಯ ಆರ್ಥಿಕತೆಗೆ ಬ್ಲೂ ಕಾಲರ್ ಕಾರ್ಮಿಕರ ಮಹತ್ವ ಮತ್ತು ಕೊಡುಗೆಗಳನ್ನು ರಾಯಭಾರ ಕಚೇರಿ ಮತ್ತು ಭಾರತ ಸರ್ಕಾರ ಅಂಗೀಕರಿಸಿದೆ. ಕಾರ್ಮಿಕರ ಕಲ್ಯಾಣಾರ್ಥವಾಗಿ ನಾವು ಯಾವುದೇ ರೀತಿಯ ನೆರವನ್ನು ನೀಡಲು ಸಿದ್ಧವಾಗಿದ್ದೇವೆ ಎಂದು ಅವರು ಹೇಳಿದರು. 
 

SCROLL FOR NEXT