ವಿದೇಶ

ಯೆಮೆನ್ ನಲ್ಲಿ ಭೀಕರ ಬಾಂಬ್ ಸ್ಪೋಟ: ಕನಿಷ್ಠ 26 ಮಂದಿ ಸಾವು, 50 ಮಂದಿಗೆ ಗಾಯ

Srinivasamurthy VN

ಅಡೆನ್: ಯೆಮೆನ್ ವಿಮಾನ ನಿಲ್ದಾಣದಲ್ಲಿ ಭೀಕರ ಬಾಂಬ್ ಸ್ಪೋಟವಾಗಿದ್ದು, ಘಟನೆಯಲ್ಲಿ ಕನಿಷ್ಠ 26 ಮಂದಿ ಸಾವಿಗೀಡಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯೆಮೆನ್ ನ ಅಡೆನ್ ವಿಮಾನ ನಿಲ್ದಾಣದಲ್ಲಿಸ ಈ ಘಟನೆ ನಡೆದಿದ್ದು, ನೂತನವಾಗಿ ರಚನೆಯಾದ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನವೊಂದು ಇಳಿದ ಕೆಲವೇ ಕ್ಷಣಗಳ ನಂತರ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಕನಿಷ್ಟ 26 ಮಂದಿ ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದಲ್ಲಿ ಯೆಮನ್‌ನ ರಾಷ್ಟ್ರಪತಿ ಅಬೆದ್ರಬ್ಬೊ ಮನ್ಸೂರ್‌ ಹಾದಿ ಅವರಿಂದ ಕೆಲ ದಿನಗಳ ಹಿಂದೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಸಚಿವರು, ಏಡನ್‌ಗೆ ಆಗಮಿಸಿದ್ದರು. ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಈ ಹೇಡಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದು, ಸಚಿವರೆಲ್ಲರೂ  ಸುರಕ್ಷಿತವಾಗಿದ್ದಾರೆ, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಸರ್ಕಾರಿ ಮೂಲಗಳು ತಿಳಿಸಿವೆ. ಅಂತೆಯೇ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎನ್ನಲಾಗಿದೆ.

ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಬಾಂಬ್ ಸ್ಫೋಟ ಹೇಡಿತನ ಕೃತ್ಯವಾಗಿದೆ. ಹಿಂಸಾಚಾರ ಸ್ವೀಕಾರಾರ್ಹವಲ್ಲ. ಭಯೋತ್ಪಾದಕ ದಾಳಿ ... ಯೆಮೆನ್ ಮತ್ತು ಅದರ ಜನರ ವಿರುದ್ಧ ನಡೆಸಿದ ಯುದ್ಧದ ಒಂದು ಭಾಗವಾಗಿದೆ. ತನಿಖೆ ಪ್ರಗತಿಯಲ್ಲಿದ್ದು,  ಸ್ಫೋಟದ ಹಿಂದಿನ ಕೈವಾಡದ ಕುರಿತು ಶೀಘ್ರ ಬಹಿರಂಗವಾಗಲಿದೆ. ಅಂತೆಯೇ ತಪ್ಪಿತಸ್ಥರನ್ನು ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಇನ್ನು ಸ್ಫೋಟದ ವೇಳೆ ವಿಮಾನದಿಂದ ಇಳಿದಿದ್ದ ಸರ್ಕಾರದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ' ಎಂದೂ ಮಾಹಿತಿ ನೀಡಿದರು.

SCROLL FOR NEXT