ವಿದೇಶ

'ಕೊರೊನಾ' ತಡೆಗಟ್ಟಲು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ: ವಿಶ್ವ ಆರೋಗ್ಯ ಸಂಸ್ಥೆ 

Sumana Upadhyaya

ಜೆನೆವಾ: ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಚೀನಾ ದೇಶ ಕೈಗೊಂಡ ಹಲವು ಕ್ರಮಗಳು ವಿದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಿದ್ದು, ಇದರ ನಿಗ್ರಹಕ್ಕೆ ಹಲವು ಅವಕಾಶಗಳ ಬಾಗಿಲನ್ನು ತೆರೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.


ಆದರೆ ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವಿಚಾರದಲ್ಲಿ ದೇಶಗಳು ಹೆಚ್ಚಿನ ಒಗ್ಗಟ್ಟು ತೋರಿಸಬೇಕು. ಶ್ರೀಮಂತ ರಾಷ್ಟ್ರಗಳ ಕೆಲವು ಸರ್ಕಾರಗಳು ವೈರಸ್ ಪ್ರಕರಣಗಳ ಅಂಕಿ ಅಂಶಗಳನ್ನು ಹಂಚಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಕೊರೊನಾ ವೈರಸ್ ನ ಶೇಕಡಾ 99 ಪ್ರಕರಣಗಳು ಚೀನಾದಲ್ಲಿದ್ದರೆ ಉಳಿದ ದೇಶಗಳಲ್ಲಿ ಇದುವರೆಗೆ 176 ಸೋಂಕು ಪೀಡಿತ ಕೇಸುಗಳು ಮಾತ್ರ ಪತ್ತೆಯಾಗಿದೆ. ಅದರರ್ಥ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಭಣವಾಗಲಿಕ್ಕಿಲ್ಲ ಎಂದಲ್ಲ. ಇದರ ವಿರುದ್ಧ ಹೋರಾಡಲು ಖಂಡಿತಾ ಹಲವು ಅವಕಾಶಗಳು ನಮ್ಮ ಮುಂದಿವೆ. ಈ ಅವಕಾಶಗಳನ್ನು ಕಳೆದುಕೊಳ್ಳುವುದು ಬೇಡ ಎಂದು ಹೇಳಿದರು.


ಚೀನಾದಿಂದ ಹೊರಗೆ ಕೇವಲ ಶೇಕಡಾ 38ರಷ್ಟು ಮಾತ್ರ ಕೊರೊನಾ ವೈರಸ್ ಕೇಸುಗಳು ನಮ್ಮ ಗಮನಕ್ಕೆ ಬಂದಿವೆ.ಕೆಲವು ಶ್ರೀಮಂತ ರಾಷ್ಟ್ರಗಳಿಂದಲೇ ಈ ಬಗ್ಗೆ ಸರಿಯಾದ ಅಂಕಿಅಂಶ ನಮಗೆ ಬಂದಿಲ್ಲ. ಸರಿಯಾದ ಅಂಕಿಅಂಶ ಸಿಗದಿದ್ದರೆ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವುದು, ಇದರ ಪರಿಣಾಮ ಎಷ್ಟರ ಮಟ್ಟಿಗೆ ಆಗಿದೆ ಎಂದು ತಿಳಿಯುವುದು ಕಷ್ಟ, ನಾವು ಸಾಧ್ಯವಾದಷ್ಟು ಸರಿಯಾದ ಕ್ರಮಗಳನ್ನು ಶಿಫಾರಸು ಮಾಡುತ್ತೇವೆ ಎಂದರು.


ಕೊರೊನಾ ವೈರಸ್ ಚೀನಾದಲ್ಲಿ ಮೊದಲಿಗೆ ಪತ್ತೆಯಾಗಿದ್ದು ಕಳೆದ ಡಿಸೆಂಬರ್ 31ರಂದು. ಅಲ್ಲಿಂದ ಇಲ್ಲಿಯವರೆಗೆ 20 ಸಾವಿರದ 400ಕ್ಕೂ ಹೆಚ್ಚು ಕೇಸುಗಳು ಚೀನಾದಲ್ಲಿಯೇ ದೃಢವಾಗಿದ್ದು ಅಲ್ಲಿ ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 425ಕ್ಕೇರಿದೆ. 20ಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಇದು ಜಾಗತಿಕ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

SCROLL FOR NEXT