ವಿದೇಶ

ಕೊರೋನಾ ಭೀತಿ: ಚೀನಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಚ, ತವರಿಗೆ ಮರಳಲು ಪರದಾಟ

Manjula VN

ವುಹಾನ್: ಕೊರೋನಾ ವೈರಸ್ ಚೀನಾದಲ್ಲಿ ದೊಡ್ಡ ಮಟ್ಟದಲ್ಲಿಯೇ ಭೀತಿಯನ್ನು ಹುಟ್ಟಿಸಿದ್ದು, ಅಗತ್ಯ ಸೌಲಭ್ಯ, ಆಹಾರವಿಲ್ಲದೆ ಭಾರತೀಯ ವಿದ್ಯಾರ್ಥಿಗಳು ಭಾರೀ ಸಂಕಷ್ಟವನ್ನು ಎದುರಿಸಿದ್ದಾರೆ. ಚೀನಾದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ತವರಿಗೆ ಮರಳಲು ಭಾರತೀಯರು ಪರದಾಡುತ್ತಿದ್ದಾರೆ. 

ಇದರಂತೆ ಚೀನಾದಲ್ಲಿ ವೈದ್ಯಕೀಯ ಮಾಡುತ್ತಿರುವ 17 ಮಂದಿ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಸಾಧ್ಯವಾಗದೆ, ಚೀನಾದ ವಿಮಾನ ನಿಲ್ದಾಣದಲ್ಲಿಯೇ ಸಂಕಷ್ಟ ಎದುರಿಸುತ್ತಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. 

ಸಿಂಗಾಪುರದಲ್ಲಿ ತಿರುವನಂತಪುರಕ್ಕೆ ಟಿಕೆಟ್ ಕಾಯ್ದಿರಿಸಿರುವ ಈ ವಿದ್ಯಾರ್ಥಿಗಳು ಸಿಂಗಾಪುರಕ್ಕೆ ತೆರಳಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಚೀನಾದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ತಡೆಹಿಡಿದಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಇರುವುದರಿಂದ ಸಿಂಗಾಪುರ ಸರ್ಕಾರ ಕೇವಲ ತನ್ನ ಪ್ರಜೆಗಳನ್ನು ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಿದೆ ಎಂದು ಹೇಳಿದ್ದಾರೆ. ಇದರಿಂದ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಸಾಧ್ಯವಾಗದೆ ವಿಮಾನ ನಿಲ್ದಾಣದಲ್ಲಿಯೇ ಸಂಕಷ್ಟ ಎದುರಿಸುತ್ತಿದ್ದಾರೆ. 

ಸಿಂಗಾಪುರದ ಯುನ್ನಾನ್ ನಲ್ಲಿ ಸ್ಕೂಟ್ ಏರ್ ಲೈನ್ಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಲಾಗಿತ್ತು. ಗುರುವಾರ ನಾವು ತಿರುವನಂತಪುರಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಎಂದಿಗಿಂತಲೂ ಟಿಕೆಟ್ ಗಳಿಗೆ ದುಪ್ಪಟ್ಟು ಹಣವನ್ನು ನೀಡಲಾಗಿತ್ತು. ಆದರೆ, ಸಿಂಗಾಪುರಕ್ಕೆ ತೆರಳಲು ನಮಗೆ ಅನುಮತಿ ನೀಡಲಾಗಿಲ್ಲ. ಮತ್ತೆ ಟಿಕೆಟ್ ಬುಕ್ ಮಾಡಲು ನಮ್ಮ ಬಳಿ ಹಣವಿಲ್ಲ. ಆಹಾರ ಖರೀದಿ ಮಾಡಲು ನಮ್ಮ ಬಳಿ ಹಣವಿಲ್ಲ. ರಾತ್ರಿ 9 ಗಂಟೆಯಾದರೂ ನಮಗೆ ತಿನ್ನಲು ಆಹಾರವಿಲ್ಲ ಎಂದು ವಿದ್ಯಾರ್ಥಿನಿ ಅನಿತಾ ಹೇಳಿದ್ದಾರೆ. 

ಅನಿವಾಸಿ ಕೇರಳಿಗರ ವ್ಯವಹಾರಗಳ ಇಲಾಖೆಯನ್ನೂ ನಾವು ಸಂಪರ್ಕಿಸಿದ್ದೇವೆ. ಆದರೆ, ಅವರು ಹಿಂತಿರುಗುವ ವಿಮಾನಗಳ ಹುಡುಕಲು ಸಹಾಯ ನೀಡಲು ಕೆಲ ಮಿತಿಗಳಿವೆ ಎಂದು ಹೇಳಿದರು. ಮತ್ತೆ ಟಿಕೆಟ್ ಖರೀದಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದಕ್ಕೆ ನಾವು ಹಾಂಕಾಂಗ್'ಗೆ ತೆರಳಬೇಕು. ಆದರೆ, ಹಾಂಕಾಂಗ್ ನಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಪ್ರತೀನಿತ್ಯ ವಿಮಾನ ಟಿಕೆಟ್ ಗಳು ದುಬಾರಿಯಾಗುತ್ತಿವೆ. ನಮ್ಮ ಬಳಿ ಇದ್ದ ಎಲ್ಲಾ ಹಣ ಕೂಡ ಖರ್ಚಾಗಿದೆ. ಕಾಲೇಜಿನ ಕ್ಯಾಂಟೀನ್ ಕೂಡ ಕೆಟ್ಟ ಪರಿಸ್ಥಿತಿಯಲ್ಲಿದೆ. ನಗರ ಕೂಡ ಸಂಪೂರ್ಣ ಬಂದ್ ಆಗಿದೆ. ಯಾವುದೇ ಅಗತ್ಯ ವಸ್ತುಗಳೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಎರಡು ವಾರಗಳ ಹಿಂದೆಯೇ ದೇಶ ತೊರೆಯಲು ನಾವು ನಿರ್ಧರಿಸಿದ್ದೆವು. ವೀಸಾ ಸಮಸ್ಯೆಯಿಂದಾಗಿ ಪ್ರಯಾಣ ತಡವಾಗಿತ್ತು. ಫೆಬ್ರವರಿ 28ಕ್ಕೆ ನಮ್ಮ ವೀಸಾ ಕೊನೆಗೊಳ್ಳಲಿದೆ. ದೇಶ ಬಿಡುವುದಕ್ಕೂ ಮುನ್ನವೇ ಅದನ್ನು ಮತ್ತೆ ನವೀಕರಿಸಬೇಕಿದೆ. ಫೆಬ್ರವರಿ 3ರಂದು ನಾವು ವೀಸಾ ನವೀಕರಿಸಿದ್ದೆವು. ಇದೇ ದಿನವೇ ನಾವು ಟಿಕೆಟ್ ಗಳನ್ನು ಬುಕ್ ಮಾಡಿದೆವು ಎಂದು ತಿಳಿಸಿದ್ದಾರೆ. 

SCROLL FOR NEXT