ವಿದೇಶ

ಮಲಾಲಾಗೆ ಗುಂಡಿಕ್ಕಿದ್ದ ತಾಲಿಬಾನ್ ಉಗ್ರ ಜೈಲಿನಿಂದ ಪರಾರಿ!

Manjula VN

ಇಸ್ಲಾಮಾಬಾದ್: 2012ರಲ್ಲಿ ಮಲಾಲಾ ಯುಸುಫ್ ಝೈ ಅವರ ಮೇಲೆ ಗುಂಡಿ ಹಾರಿಸಿದ್ದ ಮತ್ತು 2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ುಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. 

ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಉಗ್ರ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಈ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ತಾನಿರುವ ಸ್ಥಳದ ಮಾಹಿತಿ ನೀಡದ ಉಗ್ರ, ದೇವರ ಸಹಾಯದಿಂದ ನಾನು ಭದ್ರತಾ ಪಡೆಗಳ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ತಾನು ಬಂಧನಕ್ಕೊಳಗಾಗಿದ್ದ ದಿನಗಳ ಕುರಿತು ಮತ್ತು ತನ್ನ ಮುಂದಿನ ಯೋಜನೆಗಳ ಬಗ್ಗೆ ವಿವರವಾಗಿ ಹೇಳಿಕೆ ನೀಡುವುದಾಗಿ ಆಡಿಯೋದಲ್ಲಿ ತಿಳಿಸಿದ್ದಾನೆ. 

ಫೆಬ್ರವರಿ 5 2017ರಂದು ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳಿಗೆ ಶರಣಾಗಿದ್ದೆ. ಆದರೆ, ಶರಣಾಗತಿಗೆ ಮುಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವಲ್ಲಿ ಭದ್ರತಾ ಪಡೆಗಳು ವಿಫಲವಾಗಿದೆ. ನಾನು ಸುಮಾರು 3 ವರ್ಷಗಳಿಂದಲೂ ಒಪ್ಪಂದವನ್ನು ಪಾಲಿಸಿದ್ದಾನೆ. ಆದರೆ, ಈ ಚಾಣಾಕ್ಷ ಭದ್ರತಾ ಸಂಸ್ಥೆಗಳು ನನ್ನೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿದ್ದೂ ಅಲ್ಲದೆ, ನನ್ನ ಮಕ್ಕಳೊಂದಿಗೆ ನನ್ನನ್ನು ಜೈಲಿನಲ್ಲಿ ಬಂಧಿಸಿತ್ತು. ಹೀಗಾಗಿಯೇ ನಾನು ಕೊನೆಗೆ ಜೈಲಿನಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದೆ. ಇದರಂತೆ ಜನವರಿ 11 ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದೇನೆಂದು ತಿಳಿಸಿದ್ದಾನೆ. 

ಉಗ್ರನ ಈ ಆಡಿಯೋ ಕುರಿತು ಪಾಕಿಸ್ತಾನ ಸೇನೆ ಅಥವಾ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಗಳನ್ನೂ ನೀಡಿಲ್ಲ. 

SCROLL FOR NEXT