ವಿದೇಶ

ಥಾಯ್ ಮಾಲ್ ನಲ್ಲಿ ಗುಂಡಿನ ದಾಳಿ: 25 ಸಾವು, ಭದ್ರತಾ ಪಡೆಗಳಿಂದ ದಾಳಿಕೋರನ ಹತ್ಯೆ

Srinivasamurthy VN

ಬ್ಯಾಂಕಾಕ್: ಥಾಯ್ ನಗರದ ನಖಾನ್ ರಾಟ್ಚಾಸಿಮಾದ ಶಾಪಿಂಗ್ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಥೈರತ್ ಟಿವಿ ಚಾನೆಲ್ ವರದಿ ಮಾಡಿದೆ.

ಶನಿವಾರ ಬಂದೂಕುಧಾರಿ ಮಾಲ್‌ನ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಗುಂಡಿನ ದಾಳಿ ನಡೆಸಿ ನಂತರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಟಿವಿ ಚಾನೆಲ್ ವರದಿ ಮಾಡಿದೆ. ಮಾಲ್‌ನಲ್ಲಿ ಶನಿವಾರ ಇನ್ನೂ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಚಾನೆಲ್ ತಿಳಿಸಿದೆ. ಶೂಟರ್ ಅನ್ನು ನಿಗ್ರಹಿಸುವ ಕಾರ್ಯಾಚರಣೆಯ ಸಮಯದಲ್ಲಿ ಅವರ ಶವಗಳನ್ನು ವಿಶೇಷ ಪಡೆಗಳು ಪತ್ತೆ ಹಚ್ಚಿವೆ. 

ಬಡವರೇ ಹೆಚ್ಚಾಗಿರುವ ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದ ಪ್ರಮುಖ ನಗರ ನಖೋನ್ ರತ್ಚಸಿಮಾದಲ್ಲಿ ವಿಮಾನ ನಿಲ್ದಾಣ ಮಾದರಿಯಲ್ಲಿರುವ ಮಾಲ್‌ನ ಆಟೋಟ ವಲಯದಲ್ಲಿ ಗುಂಡು ಹಾರಾಟ ನಡೆದಿತ್ತು. ಶನಿವಾರ ನಡುಮಧ್ಯಾಹ್ನ ಅಡ್ಡಾದಿಡ್ಡಿ ಗುಂಡು ಹಾರಾಟ ಆರಂಭವಾದಾಗ ಜನರು ಭಯದಿಂದ ಓಡುತ್ತಿರುವ ಮತ್ತು ರಕ್ಷಣೆಗಾಗಿ ಸಿಕ್ಕಸಿಕ್ಕಲ್ಲಿ ಬಚ್ಚಿಟ್ಟುಕೊಳ್ಳುತ್ತಿರುವ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಮೂಲಗಳ ಪ್ರಕಾರ ಹಣಕಾಸು ವ್ಯವಹಾರದಿಂದ ಸಿಟ್ಟಿಗೆದ್ದಿದ್ದ ಯೋಧ ಮೊದಲು ಇಬ್ಬರನ್ನು ಕೊಂದಿದ್ದ. ಬಳಿಕ ಜನನಿಬಿಡ ಮಾಲ್‌ನಲ್ಲಿ ಶನಿವಾರ ಏಕಾಏಕಿ ಅಡ್ಡಾದಿಡ್ಡಿ ಗುಂಡು ಹಾರಿಸಲು ಆರಂಭಿಸಿದ. ಶಾಂಪಿಂಗ್‌ಗೆಂದು ಬಂದಿದ್ದವರು ಗುಂಡಿನ ಸದ್ದು ಕೇಳಿ ಭಯಗೊಂದು ದಿಕ್ಕಾಪಾಲಾಗಿ ಓಡಿದರು. ‘ಅಡ್ಡಾದಿಡ್ಡಿ ಗುಂಡು ಹಾರಿಸಿದ ಯೋಧನನ್ನು ಸಾರ್ಜೆಂಟ್ ಜಕ್ರಪಂತ್ ತೊಮ್ಮಾ ಎಂದು ಗುರುತಿಸಲಾಗಿದೆ’ ಎಂದು ಥಾಯ್ಲೆಂಡ್‌ನ ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಜನರಲ್ ಕೊಂಗ್‌ಚೀಪ್ ತಂತ್ರವನಿಚ್ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಭದ್ರತಾ ಪಡೆಗಳ ಗುಂಡಿಗೆ ಬಲಿ
ಇನ್ನು ಥಾಯ್ ನಗರದ ನಖಾನ್ ರಾಟ್ಚಾಸಿಮಾದ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯನ್ನು ವಿಶೇಷ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ. ಶನಿವಾರ, ಟರ್ಮಿನಲ್ 21 ಶಾಪಿಂಗ್ ಮಾಲ್‌ನಲ್ಲಿ ಬಂದೂಕುಧಾರಿ (ಜಕ್ರಪಂತ್ ಥೋಮ್ಮ ಎಂದು ಗುರುತಿಸಲ್ಪಟ್ಟ ಸೈನಿಕ) ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾನೆ. ಥೈಲ್ಯಾಂಡ್ ಆರೋಗ್ಯ ಸಚಿವಾಲಯದ ಪ್ರಕಾರ, ಗುಂಡಿನ ದಾಳಿಯಲ್ಲಿ ಕನಿಷ್ಠ 63 ಜನರು ಗಾಯಗೊಂಡಿದ್ದಾರೆ.

SCROLL FOR NEXT