ವಿದೇಶ

ಚೀನಾದಲ್ಲಿ 1,716 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಸ್, 6 ಸಿಬ್ಬಂದಿ ಸಾವು

Lingaraj Badiger

ಬೀಜಿಂಗ್: ಮಾರಣಾಂತಿಕ ಕೊರೋನಾ ವೈರಸ್(ಸಿಒವಿಐಡಿ -19) ಸೋಂಕಿನಿಂದ ಆರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 1,700ಕ್ಕೂ ಹೆಚ್ಚು ಸಿಬ್ಬಂದಿಗೆ ಈ ಸೋಂಕು ತಗುಲಿದೆ ಎಂದು ಶುಕ್ರವಾರ ಚೀನಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್ ನಿಂದ ಬಳಲುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟ ಒಂದು ವಾರದ ನಂತರ ಈ ಅಂಕಿ ಅಂಶ ಹೊರಬಿದ್ದಿದ್ದು, ಸೂಕ್ತ ರಕ್ಷಣಾತ್ಮಕ ಸಾಧನಗಳ ಕೊರತೆಯಿಂದಾಗಿ ವೈದ್ಯರು ಮತ್ತು ನರ್ಸ್ ಗಳು ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಸಚಿವ ಜೆಂಗ್ ಯಿಕ್ಸಿನ್ ಅವರು, ಮಂಗಳವಾರದ ವರೆಗೆ ದೇಶದಲ್ಲಿ 1,716 ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪೈಕಿ ವುಹಾನ್ ನಗರದಲ್ಲಿ 1,102 ಸಿಬ್ಬಂದಿಗೆ ಹಾಗೂ ಹುಬೇ ಪ್ರಾಂತ್ಯದಲ್ಲಿ 400 ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಜೆಂಗ್ ಹೇಳಿದ್ದಾರೆ.

ವುಹಾನ್ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮತ್ತು ನರ್ಸ್ ಗಳಿಗೆ ರಕ್ಷಣಾ ಸಾಧನಗಳನ್ನು ಒದಗಿಸಲು ಚೀನಾದ ಅಧಿಕಾರಿಗಳು ಪರದಾಡುತ್ತಿದ್ದಾರೆ.

SCROLL FOR NEXT