ವಿದೇಶ

ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ

Srinivasamurthy VN

ಜಿನೀವಾ: ಕೊರೊನ ವೈರಸ್ ಕೇಂದ್ರ ಬಿಂದುವಾದ ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಲ್ಲಿ ಆಸ್ಪತ್ರೆಯ ಮುಖ್ಯಸ್ಥರೊಬ್ಬರು ಮೃತಪಟ್ಟಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಸಂತಾಪ ಸೂಚಿಸಿದ್ದಾರೆ.

‘ವೈದ್ಯ ಡಾ. ಲಿಯು ಜಿಮಿಂಗ್ ಸಾವಿನ ಅಪಾರ ನಷ್ಟಕ್ಕೆ, ಕುಟುಂಬ ವರ್ಗದವರಿಗೆ, ಸಹೋದ್ಯೋಗಿಗಳು ಮತ್ತು ರೋಗಿಗಳಿಗೆ ಸಂತಾಪ ತಿಳಿಸುತ್ತಿದ್ದೇನೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಮಂಗಳವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ಲಿಯು ಅವರು ಕೊರೊನವೈರಸ್ ಸೋಂಕಿಗೆ ತುತ್ತಾದ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿ, ಬದುಕುಳಿಸಿದ್ದಾರೆ.’ ಎಂದು ಟೆಡ್ರೊಸ್ ಹೇಳಿದ್ದಾರೆ.

ವುಹಾನ್‌ನ ವುಚಾಂಗ್ ಆಸ್ಪತ್ರೆಯ ಮುಖ್ಯಸ್ಥ ಲಿಯು (51) ನಗರದಲ್ಲಿ ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಸೋಂಕು ವಿರುದ್ಧ ಹೋರಾಡಲು ವುಚಾಂಗ್ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಯ ನೇತೃತ್ವ ವಹಿಸಿದ್ದರು ಎಂದು ಸ್ಥಳೀಯ ಆರೋಗ್ಯ ಆಯೋಗ ತಿಳಿಸಿದೆ.

ಫೆ 11 ರ ವೇಳೆಗೆ ಒಟ್ಟು 1,716 ಚೀನಾದ ವೈದ್ಯಕೀಯ ಕಾರ್ಯಕರ್ತರು ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಕಾರ್ಯಕರ್ತರ ಹಕ್ಕುಗಳು, ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮಂಗಳವಾರ ಡಬ್ಲ್ಯುಎಚ್‌ಒ ಮಾರ್ಗದರ್ಶನ ನೀಡಿದೆ.

SCROLL FOR NEXT