ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸ್ಥಾನ ಭಾರತ ಪ್ರಯತ್ನಕ್ಕೆ ಚೀನಾ ಅಡ್ಡಗಾಲು: ಪಾಕ್ ಮಿತ್ರ ರಾಷ್ಟ್ರ ಅಪಸ್ವರ

Sumana Upadhyaya

ಬೀಜಿಂಗ್:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಚೀನಾ ಅಡ್ಡಗಾಲು ಹಾಕಲು ನೋಡುತ್ತಿದೆ. ಭಾರತ ಮತ್ತು ಬ್ರೆಜಿಲ್ ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ನೀಡಿ ಎಂದು ರಷ್ಯಾ ದೇಶ ಶಿಫಾರಸು ಮಾಡಿದರೆ ಚೀನಾ ಮಾತ್ರ ಅಪಸ್ವರ ಎತ್ತಿದೆ. ಈ ವಿಷಯದಲ್ಲಿ ಎಲ್ಲಾ ರಾಷ್ಟ್ರಗಳು ಭಿನ್ನ ನಿಲುವು ಹೊಂದಿದ್ದು ಇದಕ್ಕೆ ಪ್ಯಾಕೆಜ್ ಪರಿಹಾರ ಕಂಡುಹಿಡಿಯಬೇಕು ಎಂದು ಚೀನಾ ಹೇಳಿದೆ.


ಮೊನ್ನೆ ಬುಧವಾರ ದೆಹಲಿಗೆ ಆಗಮಿಸಿದ್ದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಭಾರತ ಮತ್ತು ಬ್ರೆಜಿಲ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾಗಬೇಕು ಎಂದು ಬೆಂಬಲ ನೀಡಿದ್ದರು. ಆರ್ಥಿಕ ಬೆಳವಣಿಗೆ, ಹಣಕಾಸಿನ ಶಕ್ತಿ, ರಾಜಕೀಯ ಪ್ರಭಾವಗಳನ್ನು ನೋಡಿದರೆ ಭಾರತ ವಿಶ್ವಸಂಸ್ಥೆಯ ಶಾಶ್ವತ ಸದಸ್ಯ ರಾಷ್ಟ್ರವಾಗುವ ಅರ್ಹತೆಯನ್ನು ಹೊಂದಿದೆ ಎಂದು ನಾವು ಭಾವಿಸುತ್ತೇವೆ ಎಂದು ಲಾವ್ರೊವ್ ಹೇಳಿದ್ದರು.


ಲಾವ್ರೊವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಗೆಂಗ್ ಶೌಂಗ್, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಸುಧಾರಣೆ ವಿಷಯದಲ್ಲಿ ಭಿನ್ನ ನಿಲುವನ್ನು ತಳೆದಿವೆ. ಹೀಗಾಗಿ ಶಾಶ್ವತ ಸದಸ್ಯ ರಾಷ್ಟ್ರವಾಗುವ ಮುನ್ನ ಪ್ಯಾಕೆಜ್ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ 5 ಶಾಶ್ವತ ಸದಸ್ಯ ದೇಶಗಳಾಗಿರುವ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತಕ್ಕೆ ಬೆಂಬಲ ನೀಡಿವೆ.ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿರುವ ಚೀನಾ ಮಾತ್ರ ಅಪಸ್ವರ ಎತ್ತಿದೆ.


ವಿಶ್ವಸಂಸ್ಥೆಯಲ್ಲಿನ ಸುಧಾರಣೆಗೆ ಅಲ್ಲಿನ ಶಾಶ್ವತ ಸದಸ್ಯತ್ವ ಸ್ಥಾನ ತಮಗೂ ನೀಡಿ ಎಂದು ಒತ್ತಾಯಿಸಲು ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ದೇಶಗಳು ಜಿ4 ಎಂದು ರಚಿಸಿಕೊಂಡು ಒತ್ತಾಯಿಸುತ್ತಿವೆ.

SCROLL FOR NEXT