ವಿದೇಶ

ಕೊರೋನಾ ವೈರಸ್ ಆತಂಕ: ಗಣರಾಜ್ಯೋತ್ಸವ ಕಾರ್ಯಕ್ರಮ ರದ್ದುಪಡಿಸಿದ ಚೀನಾದ ಭಾರತೀಯ ರಾಯಭಾರಿ ಕಚೇರಿ

Manjula VN

ಬೀಜಿಂಗ್: ಮಾರಕ ಕೊರೋನಾ ವೈರಸ್ ನೂರಾರು ಮಂದಿಯನ್ನು ಬಲಿಪಡಿದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೀಜಿಂಗ್ ನಲ್ಲಿ ಪ್ರತೀವರ್ಷ ನಡೆಯುತ್ತಿದ್ದ ಜನವರಿ 26ರ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಭಾರತೀಯ ರಾಯಭಾರಿ ಕಚೇರಿ ರದ್ದು ಮಾಡಿದೆ ಎಂದು ತಿಳಿದುಬಂದಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ ಕಚೇರಿ, ಕೊರೋನಾ ವೈರಸ್ ಇಡೀ ಚೀನಾದಲ್ಲಿ ಆತಂಕವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಗಳನ್ನು ಹಾಗೂ ಸಭೆಗಳನ್ನು ಚೀನಾ ಸರ್ಕಾರ ರದ್ದುಪಡಿಸಿದೆ. ಹೀಗಾಗಿ ಜ.26ರ ಗಣರಾಜ್ಯೋತ್ಸವ ಸಂಭ್ರವನ್ನೂ ರದ್ದುಪಡಿಸಲಾಗಿದೆ ಎಂದು ತಿಳಿಸಿದೆ. 

ಪ್ರತೀವರ್ಷ ಭಾರತೀಯ ರಾಯಭಾರಿ ಕಚೇರಿ ಬೀಜಿಂಗ್ ನಲ್ಲಿ ಗಣರಾಜ್ಯೋತ್ಸವ ಸಂಭ್ರವನ್ನು ಆಚರಿಸುತ್ತಿತ್ತು. ಇದರಂತೆ ಪ್ರಸಕ್ತ ಸಾಲಿನಲ್ಲೂ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತ್ತು. ಕಾರ್ಯಕ್ರಮಕ್ಕೆ  ಚೀನಾದ ಅಧಿಕಾರಿಗಳು, ರಾಯಭಾರಿ ಅಧಿಕಾರಿಗಳು, ಮುಖ್ಯ ಅತಿಥಿಯಾಗಿ ವಿದೇಶಾಂಗ ಉಪ ಸಚಿವ ಹಾಗೂ ಭಾರತದ ಚೀನಾ ರಾಯಭಾರಿ ಲುವೋ ಝಾವೌಹುಯಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. 

ಚೆನ್ನೈನಲ್ಲಿ ಉಭಯ ರಾಷ್ಟ್ರಗಳ ನಾಯಕರ ನಡುವೆ ನಡೆದಿದ್ದ ಅನೌಪಚಾರಿಕ ಶೃಂಗಸಭೆಯಲ್ಲಿ ಈ ಹಿಂದೆ ಮಾತನಾಡಿದ್ದ ಚೀನಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ ಮಿಕ್ರಮ್ ಮಿಸ್ರಿಯವರು, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ 70 ವರ್ಷಗಳು ಕಳೆಯುತ್ತಿದ್ದು, ಹೀಗಾಗಿ 2022 ಅತ್ಯಂತ ಪ್ರಮುಖವಾಗಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಗುರುತಿಸಿದ ಮೊದಲ ಸಮಾವಾದಿ ರಾಷ್ಟ್ರಗಳ ಪೈಕಿ ಭಾರತ ಕೂಡ ಎಂಬುದನ್ನು ಗಮನಿಸಬೇಕಾದ ಸಂಗತಿಯಾಗಿದೆ. ಉಭಯ ರಾಷ್ಟ್ರಗಳ ಪಯಣವನ್ನು ಪರಿಶೀಲಿಸಲು ಹಾಗೂ ಹೊಸ ಗುರಿಗಳನ್ನು ಒಟ್ಟಿಗೆ ಹೊಂದಲು ಇದು ಪ್ರಮುಖ ಅವಕಾಶವಾಗಿದೆ ಎಂದು ಹೇಳಿದ್ದರು. 

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಂಡು ಕೇಳರಿಯದ ರೀತಿ ಎನ್ನಬಹುದಾದ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. 830 ಮಂದಿಯಲ್ಲಿ ವೈರಾಣು ಕಂಡು ಬಂದಿದ್ದು, ಇದರಲ್ಲಿ 177 ಜನರ ಸ್ಥಿತಿ ಚಿಂತಾಜನಕವಾಗಿದೆ. ಸೋಂಕು ತಗುಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 34 ಮಂದಿ ಚಿಕಿತ್ಸೆ ಪಡೆದಿದ್ದು, ಇದೀಗ ಗುಣಮುಖರಾಗಿದ್ದಾರೆ. ಸಮುದ್ರ ಆಹಾರ ಮತ್ತು ಮಾಂಸಾಹಾರದಿಂದ ವುಹಾನ್ ನಲ್ಲಿ ಈ ವೈರಸ್ ಹರಡಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 

SCROLL FOR NEXT