ವಿದೇಶ

2036ರವರೆಗೂ ರಷ್ಯಾ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಮುಂದುವರಿಕೆ?

Manjula VN

ಮಾಸ್ಕೋ: 2036ರವರೆಗೂ ರಷ್ಯಾದ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಅವರು ಮುಂದುವರೆಯಲು ರಷ್ಯಾ ಜನತೆ ತಮ್ಮ ಮತ ಚಲಾಯಿಸುವ ಮೂಲಕ ಹಾದಿಯನ್ನು ಸುಗಮಗೊಳಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ರಷ್ಯಾದಲ್ಲಿ ಸುಮಾರು 1 ವಾರಗಳಿಂದ ಈ ಕುರಿತು ಜನಾಭಿಪ್ರಾಯ ಸಂಗ್ರಹವಾಗಿದ್ದು, ಜನಾಭಿಪ್ರಾಯದಲ್ಲಿ ಪಾಲ್ಗೊಂಡಿರುವ ಸುಮಾರು ಶೇ.77ರಷ್ಟು ಜನರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. 

ಪುಟಿನ್ ಅವರ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ 2024ಕ್ಕೆ ಕೊನೆಗೊಳ್ಳಬೇಕಾಗಿತ್ತು. ಆದರೆ, ಪುಟಿನ್ ಅಧಿಕಾರದಲ್ಲಿ ಮುಂದುವರೆಯುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ 12 ವರ್ಷಗಳವರೆಗೆ ನಿರಾತಂಕವಾಗಿ ಅಧಿಕಾರ ಚಲಾಯಿಸುವ ಅಧಿಕಾರಕ್ಕೆ ರಷ್ಯಾ ಸಂಸತ್ತು ಹಸಿರು ನಿಶಾನೆ ತೋರಿತ್ತು. 

ರಷ್ಯಾದ 383 ಸಂಸದರು ಸಂಧಾನದ ತಿದ್ದುಪಡಿ ಪರವಾಗಿ ಮತ ಚಲಾಯಿಸಿದ್ದು, 43 ಸಂಸದರು ಮತದಾನಕ್ಕೆ ಗೈರಾಗಿದ್ದಾರೆ. ಸಂಸತ್ ಮೇಲ್ಮನೆಯೂ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು, ನಿಗದಿಯಂತೆ ತಿದ್ದುಪಡಿಗೆ ಏಪ್ರಿಲ್ 22 ರಂದು ದೇಶದಾದ್ಯಂತ ಸಾರ್ವತ್ರಿಕ ಮತದಾನ ನಡೆಯಬೇಕಾಗಿತ್ತು. ಆದರೆ, ಕೊರೋನಾ ಹಿನ್ನಲೆಯಲ್ಲಿ ಜು.1 ರಂದು ನಡೆದಿರುವುದಾಗಿ ವರದಿ ತಿಳಿಸಿದೆ. 

ರಷ್ಯಾದಲ್ಲಿ 1993ರ ಸಂವಿಧಾನದ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಜನವರಿಯಲ್ಲಿ ಬಹಿರಂಗವಾಗಿತ್ತು. ಸಂವಿಧಾನಿಕ ತಿದ್ದುಪಡಿಗೆ ರಷ್ಯಾ ಸಂಸತ್ತು ಗ್ರೀನ್ ಸಿಗ್ನಲ್ ನೀಡಿದ ಬಳಿಕ ಇದೀಗ ಪುಟಿನ್ ಅವರು ಜನಾಭಿಪ್ರಾಯ ಸಂಗ್ರಹದಲ್ಲೂ ಮೇಲುಗೈ ಸಾಧಿಸಿದ್ದಾರೆ.

SCROLL FOR NEXT