ವಿದೇಶ

ಅಫ್ಘಾನಿಸ್ತಾನದಲ್ಲಿ 6500 ಪಾಕ್ ಉಗ್ರರು, ತಾಲಿಬಾನ್ ಪರ ಹೋರಾಟ: ವಿಶ್ವಸಂಸ್ಥೆ ವರದಿ

Lingaraj Badiger

ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ 6000 ದಿಂದ 6500 ಉಗ್ರರು ನೆರೆಯ ಅಫ್ಘಾನಿಸ್ತಾನದಲ್ಲಿದ್ದು,  ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ತಾನ ಪರ ಹೋರಾಟ ನಡೆಸುತ್ತಿದ್ದಾರೆಂಬ ಕಳವಳಕಾರಿ ಮಾಹಿತಿಯನ್ನ ವಿಶ್ವಸಂಸ್ಥೆ ಬಹಿರಂಗಪಡಿಸಿದೆ.

ಐಸಿಸ್ ಕುರಿತು ವಿಶ್ವಸಂಸ್ಥೆಯಿಂದ ಗುಪ್ತಚರ ವರದಿ ನೀಡಲು ನೇಮಿಸಲಾದ ಅನಾಲಿಟಿಕಲ್ ಸಪೋರ್ಟ್ ಆಂಡ್‌ ಸ್ಯಾಂಕ್ಷನ್ಸ್ ಮಾನಿಟರಿಂಗ್‌ ಟೀಮ್‌ ನೀಡಿರೋ ವರದಿಯ ಪ್ರಕಾರ, ಸುಮಾರು 6,000ದಿಂದ 6,500 ಪಾಕಿಸ್ತಾನ ಮೂಲದ ಉಗ್ರರು ಅಫ್ಘಾನಿಸ್ತಾನ ಸರ್ಕಾರದ ವಿರುದ್ಧ ತಾಲಿಬಾನ್‌ಗಾಗಿ ಹೋರಾಡ್ತಿದ್ದಾರೆ ಎಂದು ತಿಳಿಸಲಾಗಿದೆ.

ಮುಖ್ಯವಾಗಿ ಮೂರು ಉಗ್ರ ಸಂಘಟನೆಗಳನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಹರಿಕ್ ಏ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಲಷ್ಕರ್ ಏ ತೋಯ್ಬಾ (ಎಲ್ ಇಟಿ) ಹಾಗೂ ಜೈಶ್ ಏ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳು ತಾಲಿಬಾನ್ ಉಗ್ರ ಸಂಘಟನೆಯ ನೆರವಿನಿಂದ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿವೆ ಎಂದು ವಿವರಿಸಲಾಗಿದೆ.

ಅಫ್ಘಾನಿಸ್ತಾನದ ಪೂರ್ವಕ್ಕಿರುವ ಕುನಾರ್, ನಂಗರ್​ಹಾರ್​ ಮತ್ತು ನೂರಿಸ್ತಾನ ಪ್ರಾಂತ್ಯಗಳಲ್ಲಿ ಈ ಉಗ್ರರು ನೆಲೆಯೂರಿದ್ದು ತಾಲಿಬಾನ್​ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ. ಈ ಪೈಕಿ ಲಷ್ಕರ್ ಏ ತೋಯ್ಬಾದ 800 ಉಗ್ರರು ಹಾಗೂ ಜೈಶ್ ಏ ಮೊಹಮ್ಮದ್​ನ 200 ಉಗ್ರರು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದ್ದು, ಉಗ್ರ ನೆಲೆಗಳ ವಿವರವನ್ನೂ ನೀಡಲಾಗಿದೆ.

ವಿಶ್ವಸಂಸ್ಥೆಯ ತಂಡವೇ ಹೀಗೊಂದು ವರದಿ ನೀಡಿರೋದು, ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಅಸಲಿ ಬದ್ಧತೆಯನ್ನ ಬಹಿರಂಗ ಪಡಿಸಿದಂತಾಗಿದೆ.

SCROLL FOR NEXT