ವಿದೇಶ

ಅಮೆರಿಕ: 2008ರ ಮುಂಬೈ ದಾಳಿ ಸಂಚುಕೋರ ಉಗ್ರ ರಾಣಾ ಜಾಮೀನು ಅರ್ಜಿ ವಜಾ

Srinivasamurthy VN

ವಾಷಿಂಗ್ಟನ್‌: 2008ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧನಕ್ಕೀಡಾಗಿರುವ ದಾಳಿ ಪ್ರಕರಣದ ಪ್ರಧಾನ ಸಂಚುಕೋರರಲ್ಲಿ ಒಬ್ಬನಾಗಿರುವ ಉದ್ಯಮಿ ತಹವ್ವೂರ್ ರಾಣಾನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ರಾಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಿದರೆ ಆತ ಪರಾರಿಯಾಗುವ ಅಪಾಯವಿದೆ ಎಂದು ವಾದಕ್ಕೆ ಮನ್ನಣೆ ನೀಡಿದ್ದು, ಇದೇ ಕಾರಣಕ್ಕೆ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. 

‘ಮುಂಬೈ ದಾಳಿಯ ಆರೋಪಿಯಾಗಿರುವ ಈತನಿಗೆ ಭಾರತದಲ್ಲಿ ಮರಣದಂಡನೆಯಾಗುವ ಸಾಧ್ಯತೆ ಇದೆ. ಈಗ ಜಾಮೀನು ನೀಡಿದರೆ, ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಆತ ಕೆನಡಾಗೆ ಪರಾರಿಯಾಗುವ ಸಾಧ್ಯತೆ ಇದೆ. ಒಂದೇ ವೇಳೆ ಹಾಗೇನಾದರೂ ಆದರೆ ಅದು ಅಮೆರಿಕದ ಅಧಿಕಾರಿಗಳಿಗಾಗುವ ಮುಖಭಂಗ. ಅಲ್ಲದೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೂ ಇದು ಪರಿಣಾಮ ಬೀರಬಹುದು ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇನ್ನು ಭಾರತವು ಕೂಡ ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಈಗಾಗಲೇ ಘೋಷಿಸಿದ್ದು, ಈತನನ್ನು ಭಾರತದ ವಶಕ್ಕೆ ನೀಡುವಂತೆ ಭಾರತೀಯ ಅಧಿಕಾರಿಗಳು ಹಿಂದಿನಿಂದಲು ಪ್ರಯತ್ನ ಮುಂದುವರೆಸಿದ್ದಾರೆ.

ಪಾಕಿಸ್ತಾನ ಮೂಲದ ರಾಣಾ, ಕೆನಡಾದ ಪ್ರಜೆಯಾಗಿದ್ದು, ಷಿಕಾಗೊದಲ್ಲಿ ಉದ್ಯಮ ನಡೆಸುತ್ತಿದ್ದ. ಈತ ಮುಂಬೈ ದಾಳಿಯ ಆರೋಪಿ ಡೇವಿಡ್‌ ಕೋಲ್ಮನ್‌ ಹೆಡ್ಲಿಯ ಬಾಲ್ಯ ಸ್ನೇಹಿತನಾಗಿದ್ದು, ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ. 59 ವರ್ಷದ ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕಕ್ಕೆ ಮನವಿ ಮಾಡಿತ್ತು. ಇದಾದ ನಂತರ ಅಮೆರಿಕ ಅಧಿಕಾರಿಗಳು ಈತನನ್ನು ಇತ್ತೀಚೆಗೆ ಪುನಃ ಬಂಧಿಸಿದ್ದರು. ಡೇವಿಡ್ ಹೆಡ್ಲಿ ಪ್ರಸಕ್ತ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

SCROLL FOR NEXT