ವಿದೇಶ

ಅಮೆರಿಕಾದಲ್ಲಿ ಹತ್ಯೆಗೀಡಾದ ಕಪ್ಪು ವರ್ಣೀಯ ಫ್ಲಾಯ್ಡ್'ಗೂ ಕೊರೋನಾ: ಮರಣೋತ್ತರ ವರದಿಯಲ್ಲಿ ಬಹಿರಂಗ

Manjula VN

ವಾಷಿಂಗ್ಟನ್: ಅಮೆರಿಕಾದಲ್ಲಿ ಪೊಲೀಸರಿಂದ ಹತ್ಯೆಗೀಡಾಗಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನಲ್ಲಿ ಕೊರೋನಾ ವೈರಸ್ ಇತ್ತು ಎಂಬುದು ಇದೀಗ ಬಹಿರಂಗಗೊಂಡಿದೆ. 

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಫ್ಲಾಯ್ಡ್ ನಲ್ಲಿ ವೈರಸ್ ಇರುವುದಾಗಿ ಹೆನ್ನೆಪಿನ್ ಕೌಂಟಿ ವೈದ್ಯಕೀಯ ಪರೀಕ್ಷಾ ಕಚೇರಿ 20 ಪುಟಗಳ ಮರಣೋತ್ತರ ವರದಿಯಲ್ಲಿ ತಿಳಿಸಿದೆ. 

ಫ್ಲಾಯ್ಡ್ ಕುಟುಂದಿಂದ ಅನುಮತಿ ಪಡೆದಿರುವ ಅಧಿಕಾರಿಗಳು, ವರದಿಯಲ್ಲಿನ ಪ್ರಮುಖ ವಿಚಾರಗಳನ್ನು ಮಾಧ್ಯಮಗಳಿಗೆ ನೀಡಿದ್ದಾರೆ. 

ವರದಿಯಲ್ಲಿ ಫ್ಲಾಯ್ಡ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ, ಘಟನೆ ವೇಳೆ ಫ್ಲಾಯ್ಡ್'ಗೆ ಹೃದಯಾಘಾತ ಸಂಭವಿಸಿತ್ತು ಎಂಬ ಅಂಶವನ್ನೂ ದಾಖಲು ಮಾಡಲಾಗಿದ್ದು, ಇದೊಂದು ಹತ್ಯೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಫ್ಲಾಯ್ಡ್'ಗೆ ಕೊರೋನಾ ವೈರಸ್ ಇತ್ತು. ಆದರೆ, ಅದು ಲಕ್ಷಣರಹಿತವಾಗಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ, ಹೃದಯ ಸಮಸ್ಯೆ ಇರುವುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ. 

ಕ್ಷುಲ್ಲಕ ಕಾರಣವೊಂದಕ್ಕೆ ಅಮೆರಿಕಾದ ಮಿನ್ನಿಯಾ ಪೊಲೀಸರು ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ನನ್ನು ಬಂಧಿಸಿದ್ದರು. ಅಲ್ಲದೆ, ವಿನಾಕಾರಣ ಆತನಿಗೆ ಹಿಂಸೆ ನೀಡಿ ಸಾವನ್ನಪ್ಪುವಂತೆ ಮಾಡಿದ್ದರು. ಫ್ಲಾಯ್ಡ್ ಕೈಕಟ್ಟಿದ್ದ ಪೊಲೀಸ್ ಅಧಿಕಾರಿಯೊಬ್ಬ ಆತನ ಕತ್ತಿನ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದ. 

ಈ ವೇಳೆ ಉಸಿರುಗಟ್ಟಿ ಫ್ಲಾಯ್ಡ್ ಸಾವನ್ನಪ್ಪಿದ್ದ. ಘಟನೆಯ ವಿಡಿಯೋ ಸಾಕಷ್ಟು ವೈರಲ್ ಆಗಿತ್ತಲ್ಲದೆ, ಅಮೆರಿಕಾದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಕೆಲವೆಡೆ ಹಿಂಸಾಚಾರ ಕೂಡ ನಡೆದಿತ್ತು. 

SCROLL FOR NEXT