ವಿದೇಶ

ಕೊರೋನಾ ವೈರಸ್ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪ್ರಯೋಗ ಆರಂಭ: ವಿಶ್ವ ಆರೋಗ್ಯ ಸಂಸ್ಥೆ

Sumana Upadhyaya

ಜಿನೀವಾ: ಕೊರೋನಾ ವೈರಸ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ವೈದ್ಯಕೀಯ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಸುರಕ್ಷತಾ ಪರಾಮರ್ಶೆಯನ್ನು ನಡೆಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು ಎಂದು ಕಳೆದ ತಿಂಗಳು 25ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಇದೀಗ ತನ್ನ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಬದಲಾಯಿಸಿದ್ದು ಪ್ರಯೋಗಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯಿಂದ ಕೋವಿಡ್-19 ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ದ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆ ಪ್ರಕಟಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸಾಮಾನ್ಯವಾಗಿ ಮಲೇರಿಯಾ ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಕೋವಿಡ್-19 ಚಿಕಿತ್ಸೆಗಾಗಿ ಬಳಸಲು ಶಿಫಾರಸು ಮಾಡಿ ಭಾರತದಿಂದ ತರಿಸಿಕೊಂಡಿದ್ದರು. ಹಲವು ದೇಶಗಳ ಸರ್ಕಾರಗಳು ಈ ಔಷಧಿ ಬಳಕೆಯನ್ನು ಬೆಂಬಲಿಸಿವೆ.

ಕಳೆದ ವಾರ, ಸಾಲಿಡಾರಿಟಿ ಟ್ರಯಲ್‌ನ ಕಾರ್ಯನಿರ್ವಾಹಕ ಗುಂಪು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಹೆಚ್ಚಾಗಿ ಮಾಡುವುದಕ್ಕೆ ತಡೆ ತಂದಿತ್ತು.  ಔಷಧದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

SCROLL FOR NEXT