ವಿದೇಶ

ಭಾರತೀಯ ಬೇಹುಗಾರಿಕಾ ಕ್ವಾಡ್‌ಕಾಪ್ಟರ್' ಹೊಡೆದುರುಳಿಸಿದ್ದೇವೆ: ಪಾಕಿಸ್ತಾನ ಸೇನೆ

Nagaraja AB

ಇಸ್ಲಾಮಾಬಾದ್:ಗಡಿಯೊಳಗೆ ಅಕ್ರಮವಾಗಿ ನುಸುಳಿದ ಭಾರತೀಯ ಬೇಹುಗಾರಿಕೆಯ ಕ್ವಾಡ್ ಕಾಪ್ಟರ್ ನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಸೇನೆ ಶನಿವಾರ ಹೇಳಿಕೊಂಡಿದೆ. 

ಮಿನಿ ಕಾಪ್ಟರ್ ಅಂತಾರಾಷ್ಟ್ರೀಯ ನಿಯಂತ್ರಣ ರೇಖೆಯ ಖಂಜರ್ ವಲಯದಲ್ಲಿ ದೇಶದ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು, 500 ಮೀಟರ್ ನಷ್ಟು ಪಾಕಿಸ್ತಾನಕ್ಕೆ ಸೇರಿದ ಗಡಿಯ ಒಳಗಡೆ ನುಗ್ಗಿದೆ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಹೇಳಿದ್ದಾರೆ. 

ಈ ವರ್ಷದಲ್ಲಿ ಇದು ಸೇರಿದಂತೆ 8 ಭಾರತೀಯ ಕ್ವಾಡ್ ಕಾಪ್ಟರ್ ಗಳನ್ನು ಪಾಕಿಸ್ತಾನ ಸೇನೆಯಿಂದ ಹೊಡೆದುರುಳಿಸಲಾಗಿದೆ. ಕಳೆದ ತಿಂಗಳು ಅಂದರೆ ಮೇ 27 ಮತ್ತು ಮೇ 29 ರಂದು ಇದೇ ರೀತಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ್ದ ಎರಡು ಕ್ವಾಡ್ ಕಾಪ್ಟರ್ ಗಳು ಹೊಡೆದುರುಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಪಾಕಿಸ್ತಾನ ಈ ಹಿಂದೆ ನೀಡಿದ ಇಂತಹ ಹೇಳಿಕೆಯನ್ನು ಭಾರತ ತಳ್ಳಿಹಾಕಿತ್ತು. 

ಕಳೆದ ವರ್ಷ ಫೆಬ್ರವರಿ 14 ರಂದು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಫೆಬ್ರವರಿ 26 ರಂದು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರಗಳು ಇದ್ದ ಬಾಲಕೋಟ್ ನಲ್ಲಿ ಭಾರತೀಯ ಸೇನೆಯಿಂದ ವಿಮಾನ ದಾಳಿ ನಡೆದ ನಂತರ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿತ್ತು. 

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜಮ್ಮು-ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು,  ಭಾರತದ ಹೈಕಮೀಷನರ್ ಅವರನ್ನು ವಜಾಗೊಳಿಸುವ ಮೂಲಕ ಪಾಕಿಸ್ತಾನ,  ಭಾರತದೊಂದಿಗಿನ ರಾಯಭಾರ ಸಂಬಂಧವನ್ನು ಕಡಿತಗೊಳಿಸಿಕೊಂಡಿದೆ.     

SCROLL FOR NEXT