ವಿದೇಶ

ಕೊರೋನಾ ವೈರಸ್‌ ಸೋಂಕು ಲಕ್ಷಣಗಳ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳ ಸೇರ್ಪಡೆ!

Srinivasamurthy VN

ನ್ಯೂಯಾರ್ಕ್‌:  ಮಾರಕ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳ ಪಟ್ಟಿಗೆ ಇದೀಗ ಮತ್ತೆ ಮೂರು ಹೊಸ ಲಕ್ಷಣಗಳು ಸೇರ್ಪಡೆಯಾಗಿವೆ.

ಹೌದು.. ಚೀನಾದ ವುಹಾನ್‌ ನಲ್ಲಿ ಪತ್ತೆಯಾದ ಕೊರೋನಾ ವೈರಸ್‌ ಸೋಂಕಿನ ಗುಣಲಕ್ಷಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಆರಂಭದಲ್ಲಿ 3ರಷ್ಟಿದ್ದ ಸೋಂಕಿನ ಲಕ್ಷಣಗಳ ಸಂಖ್ಯೆ ಇದೀಗ 11ಕ್ಕೆ ಏರಿಕೆಯಾಗಿದೆ. 

ಹೌದು.. ಆರಂಭದಲ್ಲಿ ಕೇವಲ ಮೂರು ಲಕ್ಷಣಗಳನ್ನು ಕೊರೋನಾ ಸೋಂಕಿನ ಲಕ್ಷಣಗಳು ಎಂದು ಗುರುತಿಸಲಾಗಿತ್ತು. ಬಳಿಕ ಅದರ ಸಂಖ್ಯೆ 9ಕ್ಕೆ ಏರಿತ್ತು. ಇದೀಗ ಈ ಪಟ್ಟಿಗೆ ಮತ್ತೆ ಮೂರು ಹೊಸ ಲಕ್ಷಣಗಳು ಸೇರ್ಪಡೆಯಾಗಿವೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸಿಡಿಸಿ) ಕೊರೊನಾ ಸೋಂಕಿನ ಆರು ಹೊಸ ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳನ್ನು ಸೇರಿಸಿದ್ದು, ವಾಕರಿಕೆ ಅಥವಾ ವಾಂತಿಯಾಗುವುದು, ಅತಿಸಾರ ಭೇದಿ, ನಿರಂತರವಾಗಿ ಮೂಗು ಸೋರುವಿಕೆಯನ್ನು ಸೋಂಕಿನ ಲಕ್ಷಣಗಳ ಪಟ್ಟಿಗೆ ಸೇರಿಸಿದೆ. 

ಸಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೊರೋನಾ ವೈರಸ್‌ನ ಒಟ್ಟು 11 ರೋಗ ಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ. ಅಲ್ಲದೆ "ಕೋವಿಡ್‌–19 ವೈರಸ್ ಬಗ್ಗೆ ಅಧ್ಯಯನಗಳು ಮುಂದುವರೆದಿದ್ದು, ಈ ಪಟ್ಟಿಯು ಪರಿಷ್ಕರಣೆಗೊಳ್ಳುತ್ತಾ ಮುಂದುವರಿಯಲಿದೆ ಎಂದು ಹೇಳಿದೆ.

ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಮೈ ನಡುಗುವಿಕೆ, ಸ್ನಾಯು ಸೆಳೆತ, ತಲೆ ನೋವು, ಗಂಟಲು ನೋವು ಮತ್ತು ಹಠಾತ್ತನೆ ರುಚಿ ಅಥವಾ ವಾಸನೆ ಕಂಡು ಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್‌ -19 ನ  ಇತರೆ ಲಕ್ಷಣಗಳಾಗಿವೆ.

SCROLL FOR NEXT