ವಿದೇಶ

ಇಟಲಿಯಲ್ಲೂ ಕೊರೋನಾ ಮರಣ ಮೃದಂಗ: ಒಂದೇ ದಿನ 41 ಸಾವು, 148ಕ್ಕೇರಿದ ಸಾವಿನ ಸಂಖ್ಯೆ

Srinivasamurthy VN

ರೋಮ್: ಮಾರಾಣಾಂತಿಕ ಕೊರೋನಾ ವೈರಸ್ ಪ್ರವಾಸಿಗರ ಸ್ವರ್ಗ ಇಟಲಿಯಲ್ಲೂ ಮರಣ ಮೃದಂಗ ಮುಂದುವರೆಸಿದ್ದು, ನಿನ್ನೆ ಒಂದೇ ದಿನ ಇಟಲಿಯಲ್ಲಿ 41 ಸೋಂಕಿತರು ಸಾವನ್ನಪ್ಪಿದ್ದು, ಈ ವರೆಗೂ ಕೊರೋನಾ ವೈರಸ್ 148 ಮಂದಿಯನ್ನು ಬಲಿತೆಗೆದುಕೊಂಡಿದೆ.

ಗುರುವಾರ ಒಂದೇ ದಿನ ಇಟಲಿಯಲ್ಲಿ 41 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಇಟಲಿಯಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 148ಕ್ಕೆ ಏರಿಕೆಯಾಗಿದೆ. ಇಟಲಿಯ ಒಟ್ಟು 22 ಪ್ರಾಂತ್ಯಗಳಲ್ಲಿ ಕೊರೋನಾ ವೈರಸ್ ಸೋಂಕು ಹಬ್ಬಿದ್ದು, ಸೋಂಕು ಪೀಡಿತ ಪ್ರಾಂತ್ಯಗಳಲ್ಲಿ ಶಾಲೆಗಳಿಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ. 

ಪ್ರವಾಸಿಗರ ಸ್ವರ್ಗ ರೋಮ್ ನಲ್ಲಿ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳಲ್ಲಿ ನೀರವ ಮೌನ ಆವರಿಸಿದೆ. ರೆಸ್ಟೋರೆಂಟ್ ಗಳು ಫುಡ್ ಸ್ಟ್ರೀಟ್ ಗಳು ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿವೆ. ಸಿನಿಮಾ ಹಾಲ್ ಗಳ ಮುಚ್ಚಲಾಗಿದೆ.

ಸೋಂಕು ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ಹೆಚ್ಚು ಜನರು ಸೇರದಂತೆ ನಿರ್ದೇಶ ನೀಡಿದ್ದು, ಮನೆಗಳಲ್ಲಿಯೇ ಉಳಿಯುವಂತೆ ಸಲಹೆ ನೀಡಲಾಗಿದೆ. ಕೊರೋನಾ ವೈರಸ್ ಭೀತಿ ಇಟಲಿ ಪ್ರವಾಸೋಧ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಏರ್ ಲೈನ್ಸ್ ಸಂಸ್ಥೆಗಳು ವ್ಯಾಪಕ ನಷ್ಟ ಅನುಭವಿಸುತ್ತಿವೆ. ಈಗಾಗಲೇ ಬುಕ್ ಮಾಡಲಾಗಿದ್ದ ಏರ್ ಲೈನ್ ಟಿಕೆಟ್ ಗಳನ್ನು ಪ್ರವಾಸಿಗರು ರದ್ದು ಮಾಡುತ್ತಿದ್ದು, ಇದು ಇಟಲಿ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಅಲ್ಲದೆ ಪ್ರವಾಸಿಗರಿಲ್ಲದೇ ರೋಮ್ ನ ಖ್ಯಾತನ ಪ್ರವಾಸಿ ತಾಣಗಳಲ್ಲಿನ ಸಣ್ಣ ಮತ್ತು ಮಧ್ಯ ಉಧ್ಯಮಗಳೂ ಕೂಡ ನಷ್ಛ ಅನುಭವಿಸುತ್ತಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿವೆ.

SCROLL FOR NEXT