ವಿದೇಶ

ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದಾದ್ಯಂತ 5000 ಮಂದಿ ಬಲಿ: ಇರಾನ್, ಇಟಲಿ, ಸ್ಪೇನ್'ನಲ್ಲಿ ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ವೈರಸ್ 

Manjula VN

ನವದೆಹಲಿ: 4 ತಿಂಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡು ಇದೀಗ ವಿಶ್ವದ 138 ರಾಷ್ಟ್ರಗಳಿಗೆ ಹಬ್ಬಿರಿಸುವ ಕೊರೋನಾ ವೈರಸ್'ಗೆ ಈ ವರೆಗೂ 5000 ಮಂದಿ ಬಲಿಯಾಗಿದ್ದಾರೆ. ಮೊದಲಿಗೆ ಸೋಂಕು ಕಾಣಿಸಿಕೊಂಡ ಚೀನದಲ್ಲಿ ಅಚ್ಚರಿಯ ರೀತಿಯಲ್ಲಿ ಸಮಸ್ಯೆಯನ್ನು ನಿವಾರಿಸಲಾಗುತ್ತಿದ್ದು, ಗುರುವಾರ ಕೇವಲ 8 ಹೊಸ ಪ್ರಕರಣ ಬೆಳಕಿಗೆ ಬಂದಿದ್ದರೆ, ಕೇವಲ 7 ಜನರು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. 

ಸೋಂಕಿತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ವರೆಗೂ ವಿಶ್ವದಾದ್ಯಂತ 139,000 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. 

ಈ ನಡುವೆ ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರ ಮತ್ತೆ 5 ಜನರಲ್ಲಿ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. 

ದೇಶಾದ್ಯಂತ ಹರಡುತ್ತಿರುವ ಮಾರಕ ರೋಗದ ತಡೆಗೆ  ರಾಜ್ಯಗಳು ಮತ್ತು ಸುಪ್ರೀಂ ಕೋರ್ಟ್ ಸಹ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಮಾಲ್ ಮತ್ತು ಸಿನೆಮಾ ಹಾಲ್ ಗಳನ್ನು ಮುಚ್ಚುವಂತೆ ಬಿಹಾರ ಮತ್ತು ಕರ್ನಾಟಕ ಸರ್ಕಾರ ಆದೇಶಿಸಿದೆ.  ಅಲ್ಲದೆ ದೊಡ್ಡ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ.

ಭಾರತದ ಕ್ರಿಕೆಟ್‌ನ ಸರ್ವೋಚ್ಚ ಸಂಸ್ಥೆಯಾದ ಬಿಸಿಸಿಐ  ಭಾರತ - ದಕ್ಷಿಣ ಆಫ್ರಿಕಾ ಏಕದಿನ ಪಂದ್ಯಗಳನ್ನು ರದ್ದುಗೊಳಿಸಲು ನಿರ್ಧರಿಸಿತು. ಐಪಿಎಲ್ ಕೂಡ ಮುಂದೂಡಲ್ಪಟ್ಟಿತು 

ಇನ್ನು ಕಳೆದ ಮೂರು ದಿನದ ಹಿಂದೆ ಮೃತಪಟ್ಟಿದ್ದ ಕಲಬುರಗಿಯ76  ವರ್ಷದ  ವೃದ್ದ ಕೊರೋನಾ ಸೋಂಕಿನಿಂದಲೇ ಸಾವನ್ನಪ್ಪಿರುವುದಾಗಿ ನಿನ್ನೆ (ಗುರುವಾರ) ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿತ್ತು. ಇದು ದೇಶದ ಮೊದಲ ಕೊರೋನಾವೈರಸ್ ನಿಂದ ಉಂಟಾದ ಸಾವಿನ ಪ್ರಕರಣವಾಗಿತ್ತು.

SCROLL FOR NEXT