ವಿದೇಶ

ಕೊರೋನಾ ನಿರ್ನಾಮಕ್ಕೆ ಭಾರತವೇ ನಿರ್ಣಾಯಕ: ವಿಶ್ವ ಆರೋಗ್ಯ ಸಂಸ್ಥೆ 

Srinivas Rao BV

ವಿಶ್ವಸಂಸ್ಥೆ: ಕೊರೋನಾ ಮಹಾಮಾರಿಯನ್ನು ನಿರ್ನಾಮ ಮಾಡುವುದಕ್ಕೆ ಜಗತ್ತೇ ಹರಸಾಹಸಪಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದೆ. 

ವೈರಸ್ ಹರಡುವಿಕೆ ತಡೆಗಟ್ಟುವುದಕ್ಕೆ ಭಾರತದ ಕ್ರಮಗಳನ್ನು ಈಗಾಗಲೇ ಮಾದರಿ ಎಂದು ಪರಿಗಣಿಸಲಾಗುತ್ತಿದ್ದು, ವಿಶ್ವಸಂಸ್ಥೆ ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮೈಕಲ್ ಜೆ ರಿಯಾನ್, ಕೊರೋನಾ ವೈರಸ್ ನಿಯಂತ್ರಿಸುವ ಅಗಾಧ ಶಕ್ತಿ ಭಾರತಕ್ಕೆ ಇದೆ. ಈ ಹಿಂದೆಯೂ ಭಾರತ ಹಲವಾರು ಸಾಂಕ್ರಾಮಿಕ ರೋಗಗಳನ್ನು ಉತ್ತಮವಾಗಿ ನಿಯಂತ್ರಿಸಿ ನಿರ್ನಾಮ ಮಾಡಿರುವ ಇತಿಹಾಸವಿದೆ ಎಂದು ಹೇಳಿದ್ದಾರೆ.  

ಕೊರೋನಾ ವೈರಸ್ ನ ನಿಯಂತ್ರಣ ಭಾರತ ಹಾಗೂ ಚೀನಾದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರಗಳು ತೆಗೆದುಕೊಳ್ಳುವ ಕ್ರಮಗಳು, ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ಮೈಕಲ್ ಜೆ ರಿಯಾನ್ ಹೇಳಿದ್ದಾರೆ.

ಭಾರತ ಕೈಗೊಳ್ಳುವ ಕಠಿಣ ಕ್ರಮಗಳು ನಿಜಕ್ಕೂ ಮಹತ್ವದ್ದಾಗಿರಲಿವೆ, ಸಣ್ಣ ಸಿಡುಬು ಸೇರಿದಂತೆ ಹಲವು ರೋಗಗಳ ವಿರುದ್ಧ ಹೋರಾಟದಲ್ಲಿ ಭಾರತ ನೇತೃತ್ವ ವಹಿಸಿ ವಿಶ್ವವನ್ನು ಮುನ್ನಡೆಸಿ ಯಶಸ್ವಿಯಾಗಿತ್ತು. ವಿಶ್ವಕ್ಕೆ ಅತ್ಯಂತ ಅದ್ಭುತವಾದ ಗಿಫ್ಟ್ ನೀಡಿತ್ತು, ಪೊಲಿಯೋ ವಿಷಯದಲ್ಲೂ ಭಾರತ ಯಶಸ್ವಿಯಾಗಿ ವಿಶ್ವವನ್ನು ಮುನ್ನಡೆಸಿದೆ. ಭಾರತಕ್ಕೆ ರೋಗ ತಡೆಗಟ್ಟುವ ಅಗಾಧವಾದ ಶಕ್ತಿ ಸಾಮರ್ಥ್ಯಗಳಿವೆ ಆದ್ದರಿಂದ ಕೊರೋನಾ ನಿರ್ನಾಮಕ್ಕೆ ಭಾರತವೇ ನಿರ್ಣಾಯಕ ಎಂದು ಮೈಕಲ್ ಜೆ ರಿಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT