ವಿದೇಶ

500 ಸಾವು, 50 ಸಾವಿರ ಸೋಂಕು ಪೀಡಿತರು: ಚೀನಾ, ಇಟಲಿ ಬಳಿಕ ಕೊರೋನಾಗೆ ಕೇಂದ್ರ ಸ್ಥಾನವಾದ ಅಮೆರಿಕ

Srinivasamurthy VN

ವಾಷಿಂಗ್ಟನ್: ವಿಶ್ವದ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಖ್ಯಾತಿಗಳಿಸಿರುವ ದೊಡ್ಡಣ್ಣ ಅಮೆರಿಕ ಅಕ್ಷರಶಃ ಒಂದು ವೈರಸ್ ಮುಂದೆ ಮಂಡಿಯೂರಿದ್ದು, ವಿಶ್ವಾದ್ಯಂತ ಸಾವಿನ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಅನ್ನು ನಿಯಂತ್ರಿಸಲಾಗದೇ ಪರದಾಡುತ್ತಿದೆ.

ಈ ಬಗ್ಗೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಚೀನಾ, ಇಟಲಿ ಮತ್ತು ಸ್ಪೇನ್ ಬಳಿಕ ಅಮೆರಿಕ ಕೊರೋನಾ ವೈರಸ್ ಗೆ ಕೇಂದ್ರ ಸ್ಥಾನವಾಗುವತ್ತ ದಾಪುಗಾಲಿರಿಸಿದೆ. ಅಮೆರಿಕದಲ್ಲಿ ಈವರೆಗೂ ಮಾರಕ ವೈರಸ್ ಗೆ 500ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ಸುಮಾರು 50  ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿಗೀಡಾದ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಸೋಂಕಿನ ಸಂಖ್ಯೆಗಳು ಮಾತ್ರ ಇಳಿಕೆಯಾಗುತ್ತಿಲ್ಲ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕ ಕೊರೋನಾ ವೈರಸ್ ಕೇಂದ್ರ  ಸ್ಥಾನವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಮಾರ್ಗರೇಟ್ ಹ್ಯಾರಿಸ್ ಅವರು, ಅಮೆರಿಕದಲ್ಲಿ ಸೋಂಕು ಪ್ರಸರಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಒಟ್ಟಾರೆ ಹೊಸ ಸೋಂಕು ಪ್ರಕರಣಗಳಲ್ಲಿ ಅಮೆರಿಕ ಮತ್ತು  ಯೂರೋಪ್ ನಲ್ಲಿಯೇ ಶೇ.85ರಷ್ಟು ಪ್ರಕರಣಗಳಿವೆ. ಈ ಪೈಕಿ ಶೇ.40ರಷ್ಟು ಪ್ರಕರಣಗಳು ಅಮೆರಿಕದಿಂದ ವರದಿಯಾಗಿದೆ. ಮಂಗಳವಾರದ ಅಂತ್ಯಕ್ಕೆ ಅಮೆರಿಕದಲ್ಲಿ 559 ಮಂದಿ ಸೋಂಕಿಗೆ ತುತ್ತಾದವರು ಸಾವನ್ನಪ್ಪಿದ್ದು, ಸೋಂಕಿಗೆ ತುತ್ತಾದವರ ಸಂಖ್ಯೆ 50 ಸಾವಿರ ಗಡಿ ದಾಟಿದೆ.  ಅಮೆರಿಕದಲ್ಲೂ ಲಾಕ್ ಡೌನ್ ಹೇರಲಾಗಿದ್ದರೂ ಸೋಂಕಿನ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನಷ್ಟು ಕಠಿಣಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಇತ್ತ ಭಾರತದಲ್ಲಿ ನಿನ್ನೆ ರಾತ್ರಿಯಿಂದಲೇ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಖುದ್ಧು ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿ ಲಾಕ್ ಡೌನ್ ಘೋಷಣೆ ಮಾಡಿದರು. ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ  ಬರುವಂತೆ ಮೋದಿ ಮನವಿ ಮಾಡಿದರು.

SCROLL FOR NEXT