ವಿದೇಶ

ಕೋವಿಡ್ -19: ನ್ಯೂಯಾರ್ಕ್ ನಲ್ಲಿ 1 ಸಾವಿರ ಗಡಿ ಮೀರಿದ ಸಾವಿನ ಪ್ರಕರಣಗಳು

Nagaraja AB

ನ್ಯೂಯಾರ್ಕ್: ಜಗತ್ತಿನಾದ್ಯಂತ ಮರಣ ಮೃದಂಗ  ಬಾರಿಸುತ್ತಿರುವ ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನ್ಯೂಯಾರ್ಕ್ ರಾಜ್ಯದಲ್ಲಿ  ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರ ಗಡಿಯನ್ನು ದಾಟಿದೆ. 

ತಿಂಗಳ ಅವಧಿಯಲ್ಲಿ ಇಷ್ಟೊಂದು ಸಂಖ್ಯೆಯ ಜನರು ನ್ಯೂಯಾರ್ಕ್ ರಾಜ್ಯದಲ್ಲಿ  ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನ್ಯೂಯಾರ್ಕ್ ನಗರದಲ್ಲಿ 776, ಹೊರವಲಯದಲ್ಲಿ 250 ಸಾವಿನ ಪ್ರಕರಣಗಳು ವರದಿಯಾಗಿದ್ದು,ಮೃತರ ಸಂಖ್ಯೆ 1026 ಆಗಿರುವ ಬಗ್ಗೆ ವರದಿಯಾಗಿದೆ.

ನ್ಯೂಯಾರ್ಕ್ ನಗರದಾದ್ಯಂತ ವೇಗವಾಗಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿದೆ. ಇರಾನ್ ನಿಂದ ಹಿಂತಿರುಗಿದ್ದ ಆರೋಗ್ಯ ಸಿಬ್ಬಂದಿಯಲ್ಲಿ ಮಾರ್ಚ್ 1ರಂದು ಮೊದಲ ಬಾರಿಗೆ ಕೋವಿಡ್-19 ಪತ್ತೆಯಾಗಿತ್ತು. ಇದಾದ ಎರಡು ದಿನಗಳ ನಂತರ ಹೊರವಲಯ ನ್ಯೂ ರೊಚೆಲ್ಲಿ ವಕೀಲರೊಬ್ಬರಲ್ಲಿ ಸೋಂಕು ತಗುಲಿತ್ತು. ಇದರಿಂದಾಗಿ ಮಾರ್ಚ್ 10 ರಂದು ನ್ಯೂ ರೊಚೆಲ್ಲಿ ನಗರದಲ್ಲಿ ಶಾಲೆಗಳು, ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಅದೇ ದಿನ ನ್ಯೂಜೆರ್ಸಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.  

 ಮಾರ್ಚ್ 12 ಆಗುವಷ್ಟರಲ್ಲಿ 500 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಮಾರ್ಚ್ 13 ರಂದು 82 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಾರ್ಚ್ 20ರ ವೇಳೆಗೆ ನ್ಯೂಯಾರ್ಕ್ ನಲ್ಲಿ  ಈ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 35 ಆಗಿತ್ತು. ಅಂದಿನಿಂದ ತೀವ್ರ ನಿರ್ಬಂಧ ಜಾರಿಗೊಳಿಸಲಾಗಿದೆ. ಆರು ಮೀಟರ್ ಅಂತರದಲ್ಲಿ ಯಾವುದೇ ಸಾರ್ವಜನಿಕರು ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ.

SCROLL FOR NEXT