ವಿದೇಶ

ಅಮೆರಿಕದಲ್ಲಿ ಕೊರೋನಾಗೆ 3 ಸಾವಿರ ಮಂದಿ ಬಲಿ, 10 ಲಕ್ಷ ಜನರಿಗೆ ಸೋಂಕು ಪರೀಕ್ಷೆ: ಟ್ರಂಪ್

Lingaraj Badiger

ವಾಷಿಂಗ್ಟನ್: ಅಮೆರಿಕದಲ್ಲಿ ಮಹಾಮಾರಿ ಕೊವಿಡ್-19ಗೆ 3 ಸಾವಿರ ಮಂದಿ ಬಲಿಯಾಗಿದ್ದು, 10 ಲಕ್ಷ ಜನರಿಗೆ ಕೊರೋನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಇಂದು ನಾವು ಕೊರೋನ ಹಾವಳಿ ವಿರುದ್ಧದ ಯುದ್ಧದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದೇವೆ. 1 ಮಿಲಿಯನ್ ಅಮೆರಿಕನ್ನರನ್ನು ಪರೀಕ್ಷಿಸಲಾಗಿದೆ ಎಂದು ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕ ಆಡಳಿತವು ಈಗ ದಿನಕ್ಕೆ 1,00,000 ಮಾದರಿಗಳನ್ನು ಪರೀಕ್ಷಿಸುತ್ತಿದೆ ಎಂದು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಜರ್ ಹೇಳಿದ್ದಾರೆ.

ಈ ನಡುವೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(ಎಫ್ಡಿಎ) ಸೋಂಕುನಿವಾರಕಗೊಳಿಸುವ ಎನ್ 95 ಮಾಸ್ಕ್ ಗಳನ್ನು ಅನುಮೋದಿಸಿದ್ದು, ಆರೋಗ್ಯ ಕಾರ್ಯಕರ್ತರು ಅವುಗಳನ್ನು ಮರುಬಳಕೆ ಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ.

ದೇಶದಲ್ಲಿ ಕರೋನ ಸೋಂಕಿಗೆ ಬಲಿಯಾದವರ ಸಂಖ್ಯೆಈಗ 3,000 ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಮಾಹಿತಿ ನೀಡಿದೆ.

SCROLL FOR NEXT