ವಿದೇಶ

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷ, ಇಡೀ ನಗರದ ಜನರ ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ!

Srinivasamurthy VN

ವುಹಾನ್: ವಿಶ್ವದ 190ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ಇಡೀ ವುಹಾನ್ ನಗರದ ಜನತೆಗೆ ಕೊರೋನಾ ಪರೀಕ್ಷೆ ನಡೆಸಲು  ಮುಂದಾಗಿದೆ.

ಹೌದು.. ಕೊರೋನಾ ಸಾಂಕ್ರಾಮಿಕ ವೈರಸ್ ನ ತವರಾಗಿದ್ದ ವುಹಾನ್ ನಲ್ಲಿ ವೈರಸ್ ಸೋಂಕು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ನಗರದಲ್ಲಿನ ಎಲ್ಲ ವೈರಸ್ ಸೋಂಕಿತರು ಗುಣಮುಖರಾಗುವುದರೊಂದಿಗೆ ಇಲ್ಲಿನ ಎಲ್ಲ ಕೊರೋನಾ ಆಸ್ಪತ್ರೆಗಳನ್ನು ಮುಚ್ಚಲಾಗಿತ್ತು. ಇದಾದ ಕೆಲವೇ  ವಾರಗಳಲ್ಲಿ ವುಹಾನ್ ನಗರದಲ್ಲಿ ಮತ್ತೆ ಮಾರಕ ಕೊರೋನಾ ಹೆಮ್ಮಾರಿ ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಇಡೀ ನಗರದ ಸುಮಾರು 11 ಮಿಲಿಯನ್ ನಿವಾಸಿಗಳನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲು ಚೀನಾ ಸರ್ಕಾರ ನಿರ್ಧರಿಸಿದೆ. 

ವುಹಾನ್ ಪ್ರಾಂತ್ಯದಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದು, ಇದರಿಂದ ಬೆಚ್ಚಿರುವ ಸ್ಥಳೀಯ ಆಡಳಿತ ಇಡೀ ಪ್ರಾಂತ್ಯದ ಸಂಪೂರ್ಣ ಜನಸಂಖ್ಯೆಯನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ವುಹಾನ್‌ನಲ್ಲಿ ನೆಲೆಸಿರುವ ಸುಮಾರು 1.1 ಕೋಟಿ ಜನರನ್ನು  ಕೊರೋನಾ ಪರೀಕ್ಷೆಗೆ ಗುರಿಪಡಿಸಲು ಸ್ಥಳಿಯ ಆಡಳಿತ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಯೋಜನೆ ರೂಪಿಸುವಲ್ಲಿ ನಿರತವಾಗಿದೆ.

11 ಮಿಲಿಯನ್ ಜನರಿರುವ ನಗರದ ಎಲ್ಲಾ ನಿವಾಸಿಗಳ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. 'ಪ್ರತಿ ಜಿಲ್ಲೆಯು ತನ್ನ ವ್ಯಾಪ್ತಿಯಲ್ಲಿ ಇಡೀ ಜನಸಂಖ್ಯೆಯ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು 10 ದಿನಗಳ ಕಾಲಾವಧಿಯಲ್ಲಿ ನಡೆಸಲು ಯೋಜನೆಗಳು ಮತ್ತು ವ್ಯವಸ್ಥೆಗಳನ್ನು ಮಾಡಬೇಕು" ಎಂದು ಸ್ಥಳೀಯ ಆಡಳಿತ ನೋಟಿಸ್ ನೀಡಿದೆ. ಆದರೆ ಪರೀಕ್ಷೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಏಪ್ರಿಲ್ 8 ರಂದು 76 ದಿನಗಳ ಲಾಕ್‌ಡೌನ್ ನಂತರ ವುಹಾನ್ ನಗರವನ್ನು ಮತ್ತೆ ತೆರೆಯಲಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಡೊಂಗ್ ಕ್ಸಿ ಹು ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾನುವಾರ ಮತ್ತು ಸೋಮವಾರ ಆರು ಹೊಸ ಪ್ರಕರಣಗಳು ವರದಿಯಾಗಿವೆ. 

SCROLL FOR NEXT