ವಿದೇಶ

ಭಾರತದ ಮೇಲೆ ಕೂಡಲೇ ದಾಳಿ ನಡೆಸಿ: ಪಾಕಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ಪ್ರಧಾನಿ ಆಗ್ರಹ

Srinivasamurthy VN

ಲಾಹೋರ್: ಭಾರತದ ಮೇಲೆ ಕೂಡಲೇ ಸೇನಾ ದಾಳಿ ನಡೆಸಿ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒತ್ತಾಯಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಸೇರಿಸಿಕೊಂಡು ಭಾರತೀಯ ಹವಾಮಾನ ಇಲಾಖೆ ಹವಾಮಾನ ವರದಿ ಪ್ರಕಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಜಾ ಫಾರೂಕ್ ಹೈದರ್, ಭಾರತದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಪಿಒಕೆಯನ್ನು ಭಾರತದ್ದು ಎಂದು  ಬಿಂಬಿಸುವಂತೆ ಹವಾಮಾನ ವರದಿ ಪ್ರಕಟ ಮಾಡಲಾಗಿದ್ದು, ಭಾರತದ ಈ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಕೂಡಲೇ ಭಾರತದ ಮೇಲೆ ಸೇನಾ ದಾಳಿ ನಡೆಸಿ ಎಂದು ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ಗೆ   ಒತ್ತಾಯಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಪ್ರತಿಕ್ರಿಯೆ ಕೊಟ್ಟ ರಾಜಾ ಫಾರೂಕ್ ಹೈದರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಭಾರತಕ್ಕೆ ಉತ್ತರ ನೀಡಬೇಕಿದೆ. ಕೇವಲ ಮೌಖಿಕ ಹೇಳಿಕೆಗಳು ಮಾತ್ರ ಕೆಲಸ ಮಾಡಲ್ಲ. ನೀವು ಮುಂದೆ  ಬಂದು ಭಾರತದ ಮೇಲೆ ಸೇನಾ ದಾಳಿ ನಡೆಸುವಂತೆ ಆದೇಶಿಸಬೇಕು. ಜೊತೆಗೆ ನಿಮ್ಮ ಸಹೋದರ ಹಾಗೂ ಸಹೋದರಿಯರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಪಿಒಕೆ ಪ್ರಧಾನಿ ರಾಜಾ ಫಾರೂಕ್ ಹೈದರ್ ಅವರು, ಈ ಹಿಂದೆ ಕೂಡ ಕಾಶ್ಮೀರ ವಿಚಾರವಾಗಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಕಾರ್ಯಾಚರಣೆ (ಭಾರತದ ಗಡಿ ಒಳ  ನುಸುಳಿವಿಕೆ ಮತ್ತು ಭಯೋತ್ಪಾದನಾ ಚಟುವಟಿಕೆ) ನಿರಂತರವಾಗಿರಬೇಕು. ಆಗ ಪಿಒಕೆ ನೆಮ್ಮದಿಯಾಗಿರುತ್ತದೆ ಎಂದು ಹೇಳಿದ್ದರು. ಅಲ್ಲದೆ ಭಾರತಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತಾಳ್ಮೆಯ ನಡೆಯನ್ನು ಪ್ರಶ್ನಿಸಿರುವ ಹೈದರ್, ಇಮ್ರಾನ್ ಖಾನ್ ಇಂತಹ  ತಂತ್ರ ಮತ್ತು ವಿಧಾನ 70 ಅಲ್ಲ... 700 ವರ್ಷಗಳಾದರೂ ಪಿಒಕೆಗೆ ಸ್ವಾಯತತ್ತೆ ತಂದು ಕೊಡುವುದಿಲ್ಲ. ಕಾಶ್ಮೀರ ಎಂದೂ ಸ್ವತಂತ್ರವಾಗುವುದಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು.

SCROLL FOR NEXT