ವಿದೇಶ

ಚೀನಾದಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲು, 4 ಸಾವು, 15 ಮಂದಿಗೆ ಗಾಯ

Srinivasamurthy VN

ಬೀಜಿಂಗ್: ಚೀನಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕಿಯೊಜಿಯಾ ಕೌಂಟಿಯಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ 5.2ರಷ್ಟು ಇತ್ತು ಎಂದು ಭೂಕಂಪನ ಮಾಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಕಂಪದಿಂದಾಗಿ 4 ಮಂದಿ ಮೃತಪಟ್ಟಿದ್ದು, ಕನಿಷ್ಠ 15 ಮಂದಿ  ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಭೂಕಂಪನದ ತೀವ್ರತೆಗೆ ಯುನ್ನಾನ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದವರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗುತ್ತಿದೆ. ಭೂಕಂಪವಾದ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಚೀನಾದ  ಭೂಕಂಪ ಜಾಲ ಕೇಂದ್ರದ ಪ್ರಕಾರ, ಸೋಮವಾರ ರಾತ್ರಿ 9.47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಎಂಟು ಕಿಲೋಮೀಟರ್ ಆಳದಲ್ಲಿತ್ತು ಮತ್ತು ಇದು ಕ್ವಿಜಿಂಗ್ ನಗರದ ಹುಯಿಜ್ ಕೌಂಟಿಯ ಜೊತೆಗೆ ಜಾಟೊಂಗ್, ಕ್ಸುವಾನ್ವೆ ಮತ್ತು ಚುಕ್ಸಿಯಾಂಗ್ ಯಿ ಅಟಾನಮಸ್  ಪ್ರಿಫೆಕ್ಚರ್ ನಗರಗಳಲ್ಲಿ ಕಂಡುಬಂದಿದೆ. ಕಿಯೋಜಿಯಾ ಕೌಂಟಿ ಸರ್ಕಾರವು ಭೂಕಂಪದ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 16 ಪಟ್ಟಣಗಳಿಗೆ ರಕ್ಷಣಾ ಪಡೆಯನ್ನು ಕಳುಹಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

SCROLL FOR NEXT