ವಿದೇಶ

ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮದ್ಯದ ದೊರೆ ವಿಜಯ್ ಮಲ್ಯ ಹೊಸ ಬ್ರಹ್ಮಾಸ್ತ್ರ!

Vishwanath S

ಲಂಡನ್: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದ ಪ್ರಕರಣದಲ್ಲಿ ಕಾನೂನಾತ್ಮಕ ಹೋರಾಟದ ಎಲ್ಲ ಮಾರ್ಗಗಳು ಕೊನೆಗೊಂಡಿರುವ ಹಿನ್ನಲೆಯಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಅಂತಿಮವಾಗಿ ಬ್ರಹ್ಮಾಸ್ತ್ರ ಬಳಸಲು ಮುಂದಾಗುತ್ತಿದ್ದಾರೆ.
 
ಭಾರತದಲ್ಲಿ 9 ಸಾವಿರ ಕೋಟಿ ಸಾಲ ಮರುಪಾವತಿಸದ ವಂಚನೆ, ಅಕ್ರಮ ಹಣ ವರ್ಗಾವಣೆಯಲ್ಲಿ ಆರೋಪಗಳಿಗೆ ಒಳಗಾಗಿ ವಿಜಯ್ ಮಲ್ಯ ಲಂಡನ್ ಗೆ ಪರಾರಿಯಾಗಿದ್ದಾರೆ. ತಮ್ಮನ್ನು ಭಾರತಕ್ಕೆ ಹಸ್ತಾಂತರಿಸದಂತೆ ಮಲ್ಯ ಸಲ್ಲಿಸಿದ ಮೇಲ್ಮನವಿಯನ್ನು ಇತ್ತೀಚಿಗೆ ಬ್ರಿಟನ್ ಹೈಕೋರ್ಟ್ ತಳ್ಳಿಹಾಕಿದೆ. ಕಾನೂನು ರೀತ್ಯ ಎಲ್ಲ ಮಾರ್ಗಗಳನ್ನು ಬಳಸಿಕೊಂಡಿರುವ ಮಲ್ಯ, ಈಗ ಹೊಸ ಅಸ್ತ್ರವೊಂದನ್ನು ಬಳಸಲಿದ್ದಾರೆ ಎಂದು ಬ್ರಿಟನ್ ಕಾನೂನು ತಜ್ಞರ ಮೂಲಗಳು ಹೇಳಿವೆ. ಈಗ ಹೊಸದಾಗಿ ರಾಜಕೀಯ ನಿರಾಶ್ರಿತ ಎಂಬ ಅಸ್ತ್ರವನ್ನು ಬಳಸಲಿದ್ದಾರೆ.

ಯಾವುದೇ ವ್ಯಕ್ತಿ ಬ್ರಿಟನ್ ನಲ್ಲಿ ‘ನಿರಾಶ್ರಿತ’ ಎಂಬ ಆರ್ಹತೆ ಹೊಂದಲು, ವ್ಯಕ್ತಿ ತನ್ನ ಸ್ವಂತ ದೇಶದಲ್ಲಿ ಪ್ರಕರಣಗಳ ಮೂಲಕ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂಸಿಸುವ ಅವಕಾಶಗಳಿರುವ ಸ್ಥಿತಿಯಲ್ಲಿ ‘ನಿರಾಶ್ರಿತ’ ರೆಂದು ಪರಿಗಣಿಸಿ ಬ್ರಿಟನ್ ನಲ್ಲಿ ಭದ್ರತೆ ಕಲ್ಪಿಸಲಾಗುತ್ತದೆ. ಅಲ್ಲದೆ, ಯಾವುದೇ ವ್ಯಕ್ತಿಗೆ ‘ನಿರಾಶ್ರಿತ’ ಎಂಬ ಆರ್ಹತೆ ಕಲ್ಪಿಸಲು ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಲಿದೆ.

ವಿಚಾರಣೆ ಸುಮಾರು ಎರಡು ವರ್ಷಗಳ ಸಮಯ ಹಿಡಿಯಬಹುದು ಎಂದು ಬ್ರಿಟನ್ ಗೆ ಸೇರಿದ ಹಿರಿಯ ನ್ಯಾಯವಾದಿ ಅಭಿಪ್ರಾಯಪಟ್ಟಿದ್ದಾರೆ.. ಒಂದು ವೇಳೆ ನಿರಾಶ್ರಿತರಾಗಿ ಅರ್ಹತೆ ಪಡೆದುಕೊಳ್ಳಲು ವ್ಯಕ್ತಿ ನ್ಯಾಯಮಂಡಳಿಗೆ ಕೂಡಾ ಮೇಲ್ಮನವಿ ಸಲ್ಲಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಲ್ಯ ಹೊಸ ತಂತ್ರ ರೂಪಿಸುತ್ತಿದ್ದಾರೆ ಎಂದು ನ್ಯಾಯ ತಜ್ಞರು ವಿಶ್ಲೇಷಿಸಿದ್ದಾರೆ.

SCROLL FOR NEXT