ವಿದೇಶ

ಕೊರೋನಾ ಆರ್ಭಟಕ್ಕೆ ತುತ್ತಾದ ವಿಶ್ವದ ಟಾಪ್ 10 ರಾಷ್ಟ್ರಗಳ ಪೈಕಿ ಭಾರತಕ್ಕೆ 9ನೇ ಸ್ಥಾನ

Srinivasamurthy VN

ನವದೆಹಲಿ: ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭೀಕರವಾಗಿ ತುತ್ತಾದ ವಿಶ್ವದ ಟಾಪ್ 10 ರಾಷ್ಟ್ರಗಳ ಪೈಕಿ ಭಾರತ 9ನೇ ಸ್ಥಾನಕ್ಕೇರಿದೆ.

ದಿನಕಳೆದಂತೆ ಭಾರತದಲ್ಲಿ ಕೊರೋನಾ ಆರ್ಭಟ ಜೋರಾಗುತ್ತಿದ್ದು, ಈ ಹಿಂದೆ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ 9ನೇ ಸ್ಥಾನಕ್ಕೇರಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ ದಾಖಲೆಯ 7,466 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಭಾರತದಲ್ಲಿ  ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆಯಾಗಿದೆ. ಮೇ.25ರಂದು 1.42 ಲಕ್ಷ ಸೋಂಕಿತರ ಮೂಲಕ ಇರಾನ್ ಹಿಂದಿಕ್ಕಿ ಭಾರತ ಟಾಪ್ 10ಕ್ಕೆ ಬಂದಿತ್ತು. ಆದಾದ 4 ದಿನದಲ್ಲಿ 18,000 ಕೇಸಿನೊಂದಿಗೆ ಮತ್ತೊಂದು ಸ್ಥಾನ ಮೇಲಕ್ಕೇರಿದೆ.

ಈ ಬಗ್ಗೆ ಜಾನ್ ಹಾಪ್ ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದ್ದು, ಪ್ರಸ್ತುತ ಭಾರತದಲ್ಲಿ 1,65,386 ಸೋಂಕಿತರಿದ್ದು, ಚೀನಾಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಚೀನಾದಲ್ಲಿ 84,106 ಸೋಂಕಿತರಿದ್ದರು. ಕೇವಲ ಸೋಂಕಿತರ ಸಂಖ್ಯೆಯಲ್ಲಿ ಮಾತ್ರವಲ್ಲ  ಸಾವಿನ ಸಂಖ್ಯೆಯಲ್ಲೂ ಭಾರತ ಚೀನಾವನ್ನು ಹಿಂದಿಕ್ಕಿದ್ದು. ಭಾರತದಲ್ಲಿ ಕೊರೋನಾ ವೈರಸ್ ಗೆ 4,711 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, ಅಲ್ಲಿ 17 ಲಕ್ಷ ಸೋಂಕಿತರಿದ್ದಾರೆ. ಅಮೆರಿಕ ಬಳಿಕ ಬ್ರೆಜಿಲ್, ರಷ್ಯಾ, ಯುಕೆ, ಸ್ಪೇನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳಿದ್ದು, ಟರ್ಕಿ ಇದೀಗ 10 ಸ್ಥಾನಕ್ಕೇರಿದೆ. ಕೊರೋನಾ ವೈರಸ್ ತವರು ಚೀನಾ 14ನೇ ಸ್ಥಾನದಲ್ಲಿದ್ದು, ಬಳಿಕ  ಇರಾನ್, ಪೆರು ಮತ್ತು ಕೆನಡಾ ದೇಶಗಳಿವೆ.

ಸಾವಿನ ಸಂಖ್ಯೆಯಲ್ಲೂ ಅಮೆರಿಕ ಅಗ್ರ ಸ್ಥಾನಿಯಾಗಿದ್ದು, ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಬಳಿಕ ಬ್ರಿಟನ್, ಇಟಲಿ, ಫ್ರಾನ್ಸ್, ಸ್ಪೇನ್, ಬ್ರೆಜಿಲ್, ಬೆಲ್ಜಿಯಂ, ಮೆಕ್ಸಿಕೊ, ಜರ್ಮನಿ ಮತ್ತು ಇರಾನ್ ದೇಶಗಳು ಆಗ್ರ 10 ರಾಷ್ಟ್ರಗಳ ಪಟ್ಟಿಯಲ್ಲಿವೆ.  ಸಾವಿನ ಸಂಖ್ಯೆಯಲ್ಲಿ ಭಾರತ ಸಮಾಧಾನಕರ ಸ್ಥಾನದಲ್ಲಿದ್ದು, 13ನೇ ಸ್ಥಾನದಲ್ಲಿದೆ. ಕೆನಡಾ ಮತ್ತು ನೆದರ್ಲೆಂಡ್ ದೇಶಗಳು 11 ಮತ್ತು 12ನೇ ಸ್ಥಾನದಲ್ಲಿವೆ.

ವಲಸೆ ಕಾರ್ಮಿಕರಿಂದ ಭಾರತದಲ್ಲಿ ಸೋಂಕು ಪ್ರಮಾಣ ಏರಿಕೆ
ಇನ್ನು ದೇಶದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದ ಕೋಟ್ಯಂತರ ವಲಸೆ ಕಾರ್ಮಿಕರನ್ನು ಅವರ ತವರು ಜಿಲ್ಲೆಗಳಿಗೆ ಸೇರಿಸಲು ಸರ್ಕಾರ ಕೈಗೊಂಡ ಶ್ರಮಿಕ್ ರೈಲು ಯೋಜನೆ ಮತ್ತು ವಿಶ್ವದ ಇತರೆ ಭಾಗಗಳಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಂಡ ಪರಿಣಾಮ ದೇಶದಲ್ಲಿ  ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಲಾಕ್ ಡೌನ್ ನಿಯಮಗಳಲ್ಲಿನ ಸಡಿಲಿಕೆ, ಜನರ ಓಡಾಟ ಕೂಡ ಸೋಂಕು ಪ್ರಕರಣಗಳು ಹೆಚ್ಚಾಗಲು ಕಾರಣ ಎನ್ನಲಾಗಿದೆ.

SCROLL FOR NEXT