ವಿದೇಶ

ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ 'ಮೂಡ್' ನಲ್ಲಿ ಇಲ್ಲ: ಡೊನಾಲ್ಡ್ ಟ್ರಂಪ್

Sumana Upadhyaya

ವಾಷಿಂಗ್ಟನ್: ಭಾರತ-ಚೀನಾ ಮಧ್ಯೆ ಗಡಿ ಸಮಸ್ಯೆಯನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸಲು ಸಿದ್ದವಿರುವುದಾಗಿ ಮತ್ತೊಮ್ಮೆ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಭಾರತದ ಪ್ರಧಾನಿ ಮೋದಿಯವರ ಜೊತೆ ಮಾತನಾಡಿದ್ದು ಅವರು ಚೀನಾದೊಂದಿಗಿನ ಸಂಘರ್ಷದ ಬಗ್ಗೆ ಮಾತುಕತೆಯಾಡುವ ಮನಸ್ಥಿತಿಯಲ್ಲಿಲ್ಲ ಎಂದಿದ್ದಾರೆ.

ಅವರು ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚೀನಾ ಮತ್ತು ಭಾರತದ ನಡುವೆ ಅತಿದೊಡ್ಡ ಸಂಘರ್ಷ ನಡೆಯುತ್ತಿದೆ. ಭಾರತದಲ್ಲಿ ನನ್ನನ್ನು ಜನ ಇಷ್ಟಪಡುತ್ತಾರೆ. ಈ ದೇಶದ ಮಾಧ್ಯಮಗಳು ಇಷ್ಟಪಡುವುದಕ್ಕಿಂತ ಹೆಚ್ಚು ಭಾರತೀಯರು ನನ್ನನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ ಎಂದು ಭಾವಿಸಿದ್ದೇನೆ. ನನಗೆ ಮೋದಿಯವರೆಂದರೆ ಬಹಳ ಇಷ್ಟ. ನಿಮ್ಮ ಪ್ರಧಾನಿಯನ್ನು ನಾನು ಬಹಳ ಇಷ್ಟಪಡುತ್ತೇನೆ,ಅವರೊಬ್ಬ ತುಂಬಾ ಸಂಭಾವಿತ ವ್ಯಕ್ತಿ ಎಂದು ಟ್ರಂಪ್ ಹೊಗಳಿದ್ದಾರೆ.

1.4 ಶತಕೋಟಿ ಜನಸಂಖ್ಯೆ ಹೊಂದಿರುವ ಎರಡು ರಾಷ್ಟ್ರಗಳಾದ ಚೀನಾ ಮತ್ತು ಭಾರತದ ಮಧ್ಯೆ ಬಹುದೊಡ್ಡ ಸಂಘರ್ಷ ನಡೆಯುತ್ತಿದೆ. ಎರಡೂ ರಾಷ್ಟ್ರಗಳು ಶಕ್ತಿಶಾಲಿ ಮಿಲಿಟರಿಯನ್ನು ಹೊಂದಿವೆ. ಭಾರತಕ್ಕೆ ಈ ಹೊತ್ತಿನಲ್ಲಿ ಖುಷಿಯಿಲ್ಲ, ಬಹುಶಃ ಚೀನಾಕ್ಕೂ ಅದೇ ರೀತಿ ಇರಬಹುದು ಎಂದರು.

ಭಾರತ-ಚೀನಾ ಮಧ್ಯೆ ನಡೆಯುತ್ತಿರುವ ಗಡಿ ಸಂಘರ್ಷದ ಬಗ್ಗೆ ನಿಮಗೆ ಆತಂಕವಿದೆಯೇ ಎಂದು ಸುದ್ದಿಗಾರರು ಕೇಳಿದಾಗ, ನಾನು ಮೋದಿಯವರ ಜೊತೆ ಮಾತನಾಡಿದ್ದೇನೆ, ಚೀನಾದ ಜೊತೆಗೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತನಾಡಲು ಅವರು ಉತ್ಸುಕವಾಗಿಲ್ಲ ಎಂದು ನನಗೆ ಅನಿಸುತ್ತಿದೆ, ಮಧ್ಯಸ್ಥಿಕೆ ವಹಿಸಲು ನನ್ನನ್ನು ಕೇಳಿಕೊಂಡರೆ ನಾನು ಸಿದ್ಧನಿದ್ದೇನೆ ಎಂದರು.

SCROLL FOR NEXT