ವಿದೇಶ

ನ್ಯೂಜಿಲೆಂಡ್ ಗೆ ಸಚಿವೆಯಾದ ಭಾರತ ಮೂಲದ ಮೊಟ್ಟ ಮೊದಲ ಮಹಿಳೆ ಪ್ರಿಯಾಂಕಾ ರಾಧಾಕೃಷ್ಣನ್!

Srinivasamurthy VN

ನವದೆಹಲಿ: ನ್ಯೂಜಿಲೆಂಡ್ ಸರ್ಕಾರದ ಕ್ಯಾಬಿನೆಟ್ ಗೆ ಭಾರತ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದು, ಆ ಮೂಲಕ ನ್ಯೂಜಿಲೆಂಡ್ ಗೆ ಸಚಿವೆಯಾದ ಭಾರತ ಮೂಲದ ಮೊಟ್ಟ ಮೊದಲ ಮಹಿಳೆ ಕೀರ್ತಿಗೆ ಭಾಜನರಾಗಿದ್ದಾರೆ.

ಎರ್ನಾಕುಲಂ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಜಸಿಂಡಾ ಅರ್ಡೆರ್ನ್ ಸಚಿವ ಸಂಪುಟಕ್ಕೆ ಆಯ್ಕೆಯಾಗಿದ್ದು, ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 41 ವರ್ಷದ ಪ್ರಿಯಾಂಕಾ ಎರಡನೇ ಬಾರಿಗೆ ಸಂಸದರಾಗಿದ್ದು, ಇದೀಗ ಸಚಿವರಾಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಸಮುದಾಯ ಮತ್ತು ಸ್ವಯಂಪ್ರೇರಿತ  ವಲಯ, ವೈವಿಧ್ಯತೆ, ಸೇರ್ಪಡೆ ಮತ್ತು ಜನಾಂಗೀಯ ಸಮುದಾಯಗಳು, ಯುವಕರು ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಸಹ ಸಚಿವರಾಗಿ ಮೂರು ಪ್ರಮುಖ ಖಾತೆಗಳನ್ನು ಅವರಿಗೆ ವಹಿಸಲಾಗಿದೆ.

ಪ್ರಿಯಾಂಕಾ ಅವರು ಪರವೂರ್ ಮದವನರಂಬು ರಾಮನ್ ರಾಧಾಕೃಷ್ಣನ್ ಮತ್ತು ಉಷಾ ಅವರ ಪುತ್ರಿಯಾಗಿದ್ದು, ಕೇರಳದ ಪರಾವೂರು ಮೂಲವಾಗಿದ್ದರೂ ತಮಿಳುನಾಡಿನ ಚೆನ್ನೈನಲ್ಲಿ ಅವರ ಹೆಚ್ಚಿನ ಸಂಬಂಧಿಕರು ವಾಸವಾಗಿದ್ದಾರೆ.  ಪ್ರಿಯಾಂಕಾ ಅವರ ಅವರ ಮುತ್ತಜ್ಜ ಕೇರಳ ರಾಜ್ಯದ ಎಡ ರಾಜಕೀಯದೊಂದಿಗೆ  ಸಂಬಂಧ ಹೊಂದಿದ್ದರು, ಅಲ್ಲಿ ಅವರು ಕೇರಳ ರಾಜ್ಯ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪ್ರಿಯಾಂಕಾ ಅವರು ಹುಟ್ಟಿದ್ದು ಭಾರತದಲ್ಲಿಯೇ ಆದರೂ ಸಿಂಗಪುರದಲ್ಲಿ ಬೆಳೆದಿದ್ದರು. ಮತ್ತು ನಂತರ ನ್ಯೂಜಿಲೆಂಡ್‌ಗೆ ತೆರಳಿ ವೆಲ್ಲಿಂಗ್ಟನ್‌ನ ವಿಕ್ಟೋರಿಯಾ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅಧ್ಯಯನದಲ್ಲಿ  ಸ್ನಾತಕೋತ್ತರ ಪದವಿ ಪಡೆದರು.

ಬಳಿಕ ಲೇಬರ್ ಪಕ್ಷದ ಮುಖಂಡರಾಗಿ 14 ವರ್ಷಗಳ ಕಾಲ ಪ್ರಿಯಾಂಕಾ ಅವರು ಜನಾಂಗೀಯ ಸಮುದಾಯಗಳ ಮಾಜಿ ಸಚಿವರಾಗಿದ್ದ ಜೆನ್ನಿ ಸೇಲ್ಸಾ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಿಯಾಂಕಾ ಅವರ ಪತಿ, ರಿಚರ್ಡ್ಸನ್ ಐಟಿ ಉದ್ಯೋಗಿಯಾಗಿದ್ದು, ಅವರು ಕ್ರೈಸ್ಟ್ ಚರ್ಚ್‌ಗೆ  ಸೇರಿದವರಾಗಿದ್ದಾರೆ. 

ಇನ್ನು  ಕ್ಯಾಬಿನೆಟ್ ಮಂತ್ರಿಯಾಗಿ ಉತ್ತುಂಗಕ್ಕೇ ಸ್ಥಾನಕ್ಕೇರುವ ಮುನ್ನ 41 ವರ್ಷದ ಪ್ರಿಯಾಂಕ, ಹಳದಿ ಸೀರೆ ಧರಿಸಿ, ಆಕ್ಲೆಂಡ್‌ನ ಮೌಂಗಕೀಕಿಯಲ್ಲಿ ದೀಪಾವಳಿ ಸಂಭ್ರಮಾಚರಣೆ ವೇಳೆ ತೆಗೆದ ತಮ್ಮ ಚಿತ್ರಗಳನ್ನು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. 

SCROLL FOR NEXT